ಮತ ಎಣಿಕೆ ವ್ಯವಸ್ಥೆ; ಡಿಸಿ ಪರಿಶೀಲನೆ
ಹಾಸನ: ಹಾಸನ ಲೋಕಸಭಾ ಕ್ಷೇತ್ರ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ವಿ ಅನ್ಬುಕುಮಾರ್ ಹಾಗೂ ಜಿಲ್ಲಾ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ ಅವರು ಅಧಿಕಾರಿಗಳ ತಂಡದೊಂದಿಗೆ ಭಾನುವಾರ ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿ ಮತಯಂತ್ರಗಳ ಭಧ್ರತೆ ಹಾಗೂ ಮತ ಎಣಿಕೆಗೆ ಮಾಡಿಕೊಳ್ಳಲಾಗಿರುವ ವ್ಯವಸ್ಥೆಗಳನ್ನು ಪರಿಶೀಲಿಸಿ ಅಗತ್ಯ ಸಲಹೆ ಸೂಚನೆ ನೀಡಿದರು.
ಮತದಾನದ ನಂತರ ಪ್ರತಿ ವಿಧಾನಸಭೆವಾರು ಮತಯಂತ್ರಗಳನ್ನು ಪ್ರತ್ಯೇಕವಾದ ಕೊಠಡಿಯಲ್ಲಿ ಇಡಲಾಗುವುದು. ಅದಕ್ಕಾಗಿಯೇ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮತಯಂತ್ರಗಳ ಸುರಕ್ಷತೆಗೆ ಅಗತ್ಯವಿರುವ ತಾಂತ್ರಿಕ, ಭೌತಿಕ ಸಿದ್ಧತೆಗಳನ್ನು ತ್ವರಿತವಾಗಿ ಮಾಡಲಾಗುತ್ತಿದೆ. ಈಗಾಗಲೆ ಅನೇಕ ಕಾರ್ಯಗಳು ಮುಗಿದಿದ್ದು ಮತಯಂತ್ರಗಳನ್ನು ಇರಿಸುವ ಕಟ್ಟಡದ ಸುತ್ತ ಪೊಲೀಸ್ ಪಹರೆ, ಸೂಕ್ತ ಬೆಳಕಿನ ವ್ಯವಸ್ಥೆ, ಸಿಸಿ ಅಳವಡಿಕೆ ಮತ್ತಿತರ ವಿಷಯಗಳ ಬಗ್ಗೆ ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆಸಲಾಯಿತು.
ಮತ ಎಣಿಕೆಗೆ ಕ್ಷೇತ್ರವಾರು ಕೊಠಡಿಗಳನ್ನು ಈಗಾಗಲೇ ಗುರುತಿಸಿ ಮೀಸಲಿರಿಸಲಾಗಿದ್ದು ಈ ಎಲ್ಲಾ ರೂಂಗಳಲ್ಲಿ ಕಬ್ಬಿಣದ ಜಾಲರಿ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ, ಚುನಾವಣಾಧಿಕಾರಿ ಕಚೇರಿ, ನಿಯಂತ್ರಣ ಕೊಠಡಿ, ಏಜೆಂಟರು ಕೂರಲು ಸ್ಥಳಾವಕಾಶ. ವ್ಯವಸ್ಥಿತ ಮಾಧ್ಯಮ ಕೇಂದ್ರದ ಸ್ಥಾಪನೆ, ಮತ್ತಿತರ ಆಂಶಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು. ಚುನಾವಾಣೆ ತಹಸೀಲ್ದಾರ್ ಬಾಬುರಾವ್, ಡಿವೈಎಸ್ಪಿ ಭೀಮಕ್ಕನವರ್ ಉಪಸ್ಥಿತರಿದ್ದರು.