ಸರ್ಕಾರಿ ಅಧಿಕಾರಿಗಳೋ? 'ಕೆ'ೈ ಏಜೆಂಟರೋ?: ಬಿಜೆಪಿ ಪ್ರಶ್ನೆ
ಸಕಲೇಶಪುರ: ತಾಲೂಕಿನ ಕೆಲವು ಸರ್ಕಾರಿ ಅಧಿಕಾರಿಗಳು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಕ್ಯಾಮನಹಳ್ಳಿ ರಾಜ್ಕುಮಾರ್ ಆರೋಪಿಸಿದ್ದಾರೆ. ತಾಲೂಕಿನಲ್ಲಿ ಚುನಾವಣೆ ಪ್ರಚಾರಕ್ಕೆಂದು ಆಗಮಿಸಿರುವ ಹೈಟೆಕ್ ಪ್ರಚಾರ ವಾಹನವನ್ನು ಉಪ ವಿಭಾಗಾಧಿಕಾರಿ ಮಧುಕೇಶ್ವರ್ ವಿನಾಕಾರಣ ಅಗಲಟ್ಟಿ ಗ್ರಾಮದ ಬಳಿ ತಡೆದು ನಿಲ್ಲಿಸಿದ್ದಾರೆ. ವಾಹನಕ್ಕೆ ರಾಜ್ಯ ಚುನಾವಣೆ ಇಲಾಖೆಯಿಂದಲೇ ಅನುಮತಿ ಪಡೆದಿದ್ದು, ಜಿಲ್ಲಾದ್ಯಂತ ಕಳೆದ ಹಲವಾರು ದಿನಗಳಿಂದ ಸಂಚರಿಸುತ್ತಿದೆ ಎಂದು ಸ್ಪಷ್ಟಪಡಿಸಿದರು.
ತಾಲೂಕಿನಲ್ಲಿ ಸಹ ಹಲೆವೆಡೆ ಸಂಚಾರ ಮಾಡಿದ್ದು, ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಶುಕ್ರವಾರ ಕೆಲವು ಚುನಾವಣೆ ಅಧಿಕಾರಿಗಳು ಚಿತ್ರೀಕರಣ ಮಾಡಿಕೊಂಡಿರುತ್ತಾರೆ. ಆದರೂ ಶನಿವಾರ ಸಂಜೆಯ ವೇಳೆಗೆ ಉಪ ವಿಭಾಗಾಧಿಕಾರಿ ವಿನಾಕಾರಣ ವಾಹನ ತಡೆದಿರುತ್ತಾರೆ. ಶುಕ್ರವಾರ ಇಲ್ಲದ ನೀತಿ ಸಂಹಿತೆ ಅಡ್ಡಿ ಶನಿವಾರ ಸಂಜೆಯ ವೇಳೆಗೆ ಬರಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಮುಖಂಡರ ಕುಮ್ಕಕ್ಕಿನಿಂದ ಕೆಲವು ಅಧಿಕಾರಿಗಳು ಬಿಜೆಪಿ ಪ್ರಚಾರಕ್ಕೆ ಅಡ್ಡಿಯುಂಟು ಮಾಡುತ್ತಿದ್ದಾರೆ ಎಂದು ಕ್ಯಾಮನಹಳ್ಳಿ ರಾಜ್ಕುಮಾರ್ ಆರೋಪಿಸಿದ್ದಾರೆ.