ಹಿರೀಸಾವೆ ಹೋಬಳಿಯಲ್ಲಿ ಗೌಡರ ಪರ ಶಾಸಕ ಬಾಲಕೃಷ್ಣ ಮತಪ್ರಚಾರ
ಚನ್ನರಾಯಪಟ್ಟಣ: ಹೋಬಳಿಯ ಕಬ್ಬಳಿ ಬಸವೇಶ್ವರಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಹಾಗೂ ಸ್ಥಳೀಯ ಮುಖಂಡರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪರ ಮತ ಯಾಚನೆ ಮಾಡಿದರು.
ದೇವೇಗೌಡರು ಜಿಲ್ಲೆಗೆ ಅಥವಾ ರಾಜ್ಯಕ್ಕೆ ಮೀಸಲಾದ ರಾಜಕೀಯ ವ್ಯಕ್ತಿಯಲ್ಲ, ರಾಷ್ಟ್ರ ರಾಜಕೀಯದಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿಕೊಂಡಿರುವ ಒಂದು ಶಕ್ತಿ. ದೇಶದಲ್ಲಿ ಪ್ರಥಮ ಬಾರಿಗೆ ರು.2ಗೆ ಒಂದು ಕೆಜಿ ಅಕ್ಕಿ ಕೊಡಲು ನಿಯಮ ಜಾರಿಗೆ ತಂದದ್ದು ದೇವೇಗೌಡರು ಎಂದು ಅಭಿಪ್ರಾಯಪಟ್ಟರು.
ಗೊಬ್ಬರಕ್ಕೆ ಸಬ್ಸಿಡಿ ಕೊಟ್ಟು ಕೇವಲ ರು.350ಗೆ ರೈತರಿಗೆ ಗೊಬ್ಬರ ಕೊಡಿಸಿದ ಹೋರಾಟಗಾರರು. ಈ ಬಾರಿ ಚುನಾವಣೆ ಗೌಡರ ಕೊನೆ ಚುನಾವಣೆಯಾಗಿದ್ದು ಗೌಡರಿಗೆ ನಿಮ್ಮ ಮತದಾನದ ಛಾಪು ಒತ್ತುವ ಸುವರ್ಣಾವಕಾಶ ನಿಮ್ಮದಾಗಲಿದೆ ಅದನ್ನು ತಪ್ಪಿಸಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.
ಎಚ್.ಡಿ. ಕುಮಾರಸ್ವಾಮಿ ತಮ್ಮ ಅಧಿಕಾರ ಅವಧಿಯಲ್ಲಿ ಪ್ರೌಢಶಾಲಾ ಮಕ್ಕಳಿಗೆ ಸೈಕಲ್, ಮಾಶಾಸನ ರು.400 ಮಾಡಿದ್ದನ್ನು ಸ್ಮರಿಸಬಹುದು. ಹಾಸನ ಜಿಲ್ಲೆಗೆ ಒಟ್ಟು ರು.150 ಕೋಟಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ದೇವೇಗೌಡರ ವಿರುದ್ದ ಪರಮೇಶ್ವರ್ ಮಾತನಾಡಿರುವುದು ಕ್ಷಮಿಸಲಾಗದ ತಪ್ಪು ಎಂದು ಅಭಿಪ್ರಾಯಪಟ್ಟರು.
ದೇವೇಗೌಡರನ್ನು ಗೆಲ್ಲಿಸಿದ್ದೇ ಆದಲ್ಲಿ ಆ ಶಕ್ತಿಯನ್ನು ಉಪಯೋಗಿಸಿಕೊಂಡು ಜಿಲ್ಲೆಯ ಹಾಗೂ ತಾಲೂಕಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಹಕಾರಿಯಾಗುತ್ತದೆ ಎಂದರು.
ಪರಮ ದೇವರಾಜೇಗೌಡ ಮಾತನಾಡಿ, ಭಾರತದ ಇತಿಹಾಸದಲ್ಲಿ ದೇವೇಗೌಡರನ್ನು ಬಿಟ್ಟರೆ ಯಾವ ಮಾಜಿ ಪ್ರಧಾನಮಂತ್ರಿಯೂ, ಈ ಪರಿ ಜನ ಸಂಪರ್ಕದಲ್ಲಿಲ್ಲ ಹಾಗು ಜನಪರ ಹೋರಾಟ ಮಾಡುತ್ತಿಲ್ಲ ಎಂದರು.
ಇದೇ ವೇಳೆ ಕನುವನಘಟ್ಟದ ಮೋಹನ್‌ಕುಮಾರ್ ಹಾಗೂ ಪರಮೇಶ್ ಮತ್ತು ಬೆಂಬಲಿಗರು ಜೆಡಿಎಸ್ ಸೇರಿದರು.