ಹೊಳೆನರಸೀಪುರದಲ್ಲಿ ಮತದಾನ ಜಾಗೃತಿ ಜಾಥಾ
ಹಾಸನ: ಹೊಳೆನರಸೀಪುರದ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ, ಮತ್ತು ಸಹಾಯಕ ಚುನಾವಣಾದಿಕಾರಿ ನೇತೃತ್ವದಲ್ಲಿ ಇತ್ತೀಚೆಗೆ ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು, ಇಲ್ಲಿನ ಕಾಲೇಜು ಆವರಣದಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಿದರು. ಬ್ಯಾನರ್ ಪ್ರದರ್ಶನ ಹಾಗೂ ಕರಪತ್ರ ವಿತರಿಸಿ ಮತದಾನದ ಮಹತ್ವದ ಬಗ್ಗೆ ಚುನಾವಣಾ ಆಯೋಗ ಒದಗಿಸಿರುವ ಘೋಷಣೆಗಳೊಂದಿಗೆ ಮತದಾರರ ಜಾಗೃತಿ ಜಾಥಾ ಕಾರ್ಯಕ್ರಮ ನಡೆಸಲಾಯಿತು. ಪಟ್ಟಣದ ಪ್ರಮುಖ ಸ್ಥಳವಾದ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮತದಾರರಲ್ಲಿ ಜಾಗೃತಿ ಮೂಡಿಸಲಾಯಿತು. ತಾಲೂಕಿನ ಸಹಾಯಕ ಚುನಾವಣಾಧಿಕಾರಿ ಸುಜ್ಞಾನಮೂರ್ತಿ, ತಹಸೀಲ್ದಾರ್ ರಾಘವೇಂದ್ರ, ಸ್ವೀಪ್ ಸಮಿತಿ ತಾಲೂಕು ನೋಡಲ್ ಅಧಿಕಾರಿ ನರಸಿಂಹಯ್ಯ, ತಾಪಂ ಅಧಿಕಾರಿ ತಮ್ಮಣ್ಣಗೌಡ ಮತ್ತಿತರರು ಉಪಸ್ಥಿತರಿದ್ದರು.