ಅನ್ನದಾತಗೆ ಶುಭದಿನ ಕಾದಿವೆ ತಮ್ಮಡಿಹಳ್ಳಿ ಶ್ರೀ ಭವಿಷ್ಯ
ಅರಸೀಕೆರೆ: ಸತತ ಬರದ ಬೇಗುದಿಯಲ್ಲಿ ಬೇಯುತ್ತಿರುವ ರೈತ ಸಮುದಾಯಕ್ಕೆ ಬರುವ ದಿನಗಳಲ್ಲಿ ಆಶಾದಾಯಕ ಬೆಳವಣಿಗೆಗಳು ಕಂಡುಬರಲಿದೆ ಎಂದು ಚಿಕ್ಕನಾಯಕನಹಳ್ಳಿ ತಾಲೂಕು, ಕುಪ್ಪೂರು ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ತಾಲೂಕಿನ ಕಾಟೀಕೆರೆ, ಕಾನಿಹಳ್ಳಿ, ಕೋರನಹಳ್ಳಿ ಹಾಗೂ ಸಂಕೋಡನಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಕಾರ್ಯನಿಮಿತ್ತ ಭೇಟಿ ನೀಡಿದ್ದ ಶ್ರೀಗಳು ಭಕ್ತರೊಂದಿಗೆ ಮಾತನಾಡಿ, ಕಳೆದೆರೆಡು ವರ್ಷಗಳಿಂದ ನಿರೀಕ್ಷಿತ ಮಳೆ ಬಾರದೆ ಇರುವುದು ರೈತ ಸಮುದಾಯವನ್ನು ಸಂಕಷ್ಟಕ್ಕೆ ದೂಡಿದೆ.
ವಾತಾವರಣದಲ್ಲಿ ಅಲ್ಪ ಮಟ್ಟಿನ ಬದಲಾವಣೆಗಳು, ಏರಿಳಿತಗಳು ಕಂಡುಬಂದಿದ್ದು ಬರಲಿರುವ ದಿನಗಳಲ್ಲಿ ನಾಡು ಸುಭಿಕ್ಷವಾಗಲಿದೆ. ರೈತ ಸಮುದಾಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದರು.
ಗ್ರಾಮದ ಮುಖಂಡರಾದ ಎಸ್.ಟಿ.ಮಹಾಲಿಂಗಪ್ಪ, ಪ್ರಕಾಶ್, ಈಶ್ವರಪ್ಪ, ನೀಲಕಂಠಪ್ಪ, ಸಣ್ಣೇಗೌಡ, ಗಂಗಾಧರಸ್ವಾಮಿ, ಸತೀಶ್, ಗ್ರಾ.ಪಂ.ಸದಸ್ಯ ಶಿವಕುಮಾರ್, ನಂದೀಶ್, ಅಂಬರೀಷ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.