'ಮತದಾನ ಹಕ್ಕು ಅನುಷ್ಠಾನದಿಂದ ಸುಭದ್ರ ಸರ್ಕಾರ'
ಅರಸೀಕೆರೆ: ಸಂವಿಧಾನ ಬದ್ಧವಾದ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ದೇಶದಲ್ಲಿ ಸುಭದ್ರ ಸರ್ಕಾರ ಸ್ಥಾಪನೆಗೆ ಸಹಕರಿಸಬೇಕೆಂದು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾ.ಪಂ.ಇ.ಓ ಟಿ.ಎನ್. ಮೂರ್ತಿ ಇಂದು ಕರೆ ನೀಡಿದರು.
ಪಟ್ಟಣದ ರೇಲ್ವೆ ನಿಲ್ದಾಣದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಹಾಗೂ ಸ್ವೀಪ್ ಸಮಿತಿ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಯಶಸ್ವಿಯಾಗಲೂ ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು 18 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬ ಪುರುಷರು ಮತ್ತು ಮಹಿಳೆಯರು ಕಡ್ಡಾಯವಾಗಿ ಚಲಾಯಿಸುವ ಮೂಲಕ ದೇಶದ ಭವ್ಯ ಭವಿಷ್ಯ ನಿರ್ಮಿಸುವ ಈ ಲೋಕಸಭಾ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಈ ಪವಿತ್ರ ಮತದಾನ ಕಾರ್ಯ ತಮ್ಮ ಅತ್ಯಮೂಲ್ಯ ಕರ್ತವ್ಯ ಎಂದು ಭಾವಿಸುವ ಮೂಲಕ ವಿದ್ಯಾವಂತ ಯುವ ಸಮಾಜ ಈ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಮೂಲಕ ಮತದಾನದ ಹಕ್ಕಿನ ಬಗ್ಗೆ ತಿಳುವಳಿಕೆ ನೀಡಬೇಕೆಂದರು.
ಶೇಕಡಾವಾರು ಮತದಾನ ಹೆಚ್ಚಾಗಲಿ: ತಾಪಂ ಸಹಾಯಕ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಗೆ ಸುಭದ್ರ ಸರ್ಕಾರ ಅತ್ಯಂತ ಮುಖ್ಯವಾಗಿದ್ದು, ಸುಭದ್ರವಾದ ಸರ್ಕಾರ ರಚನೆಗೆ 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನದಲ್ಲಿ ಕಡ್ಡಾಯವಾಗಿ ಭಾಗವಹಿಸುವ ಮೂಲಕ ಶೇಕಡವಾರು ಮತದಾನ ಹೆಚ್ಚಾದರೆ ಸಮರ್ಥ ಅಭ್ಯರ್ಥಿ ಆಯ್ಕೆಯಾಗಲು ಸಾಧ್ಯ ಎಂದು ಹೇಳಿದರು.
ಮತದಾನ ಹೆಚ್ಚಿಸಲು ಪ್ರಚಾರ: ರಾಷ್ಟ್ರೀಯ ಹಿರಿಯ ಕ್ರೀಡಾಪಟು ಉಮಾಪತಿ ಮೊದಲಿಯಾರ್ ಮಾತನಾಡಿ, ದೇಶದ ಮುಂದಿನ ಭವಿಷ್ಯ ರೂಪಿಸುವ ಪ್ರಜೆಗಳಾದ ಯುವ ಸಮೂಹ ತಮ್ಮ ಮನೆಗಳ ಅಕ್ಕಪಕ್ಕದ ಜನರಲ್ಲಿ ಮತದಾನದ ಪಾವಿತ್ರತೆ ಬಗ್ಗೆ ಅರಿವು ಮೂಡಿಸಿ ಮತದಾನದಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಬೇಕು. ಅಲ್ಲದೇ, ಗ್ರಾಮೀಣಾ ಪ್ರದೇಶದ ಜನರು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುತ್ತಿದ್ದು, ಪಟ್ಟಣದ ಅನೇಕ ವಿದ್ಯಾವಂತರು ಮತದಾನ ಕಾರ್ಯದಲ್ಲಿ ಪಾಲ್ಗೊಳ್ಳದ ಕಾರಣವೇ ಮತದಾನದ ಪ್ರಮಾಣ ಶೇಕಡಾವಾರು ಕಡಿಮೆಯಾಗುತ್ತಿದೆ. ಆದ್ದರಿಂದ ಪಟ್ಟಣ ಪ್ರದೇಶದಲ್ಲಿ ಹೆಚ್ಚಿನ ಪ್ರಚಾರ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಕರಪತ್ರ ವಿತರಣೆ: ಕಾರ್ಯಕ್ರಮದ ನಂತರ ದಾರವಾಡ ಬೆಂಗಳೂರು ಇಂಟರ್ ಸಿಟಿ ಎಕ್ಸ್ಪ್ರೆಸ್ ರೈಲು ಗಾಡಿಯಲ್ಲಿ ರಾಷ್ಟ್ರೀಯ ಹಿರಿಯ ಕ್ರೀಡಾಪಟು ಉಮಾಪತಿ ಮೊದಲಿಯಾರ್ ನೇತೃತ್ವದ ತಂಡದ ಕಾರ್ಯಕರ್ತರು ತುಮಕೂರಿನವರೆಗೂ ಮತ್ತು ಅಲ್ಲಿಂದ ಪುನಃ ಅರಸೀಕೆರೆಗೆ ಪ್ರಯಾಣಿಸುವ ಮೂಲಕ ಮತದಾನ ಜಾಗೃತಿ ಬಗ್ಗೆ ಕರಪತ್ರಗಳನ್ನು ವಿತರಣೆ ಮಾಡಿದರು. ಅಂತರ ರಾಷ್ಟ್ರೀಯ ಕ್ರೀಡಾಪಟು ಎಚ್.ಟಿ.ಮಹದೇವ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರಕಾಶ್ ಮೂರ್ತಿ, ರಾಜೇಂದ್ರನ್, ಜಿಲ್ಲಾ ಪಂಚಾಯ್ತಿ ಉಪ ಎಂಜಿನಿಯರಿಂಗಗ್ವಿಭಾಗದ ಸಹಾಯಕ ಎಂಜಿನಿಯರ್ ಎನ್.ಎಂ. ಶೇಖರಪ್ಪ, ಪುರಸಭಾ ಮುಖ್ಯಾಧಿಕಾರಿ ಸತ್ಯನಾರಾಯಣ, ಪರಮೇಶ್, ಮೀನುಗಾರಿಕೆ ಇಲಾಖೆ ಅಧಿಕಾರಿ ಸಚಿನ್, ಲಯನ್ಸ್ ಅಧ್ಯಕ್ಷ ಎಂ.ವೈ. ಖಾನ್, ಹರಿಪ್ರಸಾದ್ ಸುರೇಶ್ ಕುಮಾರ್ ಹಾಗೂ ಇತರರು ಇದ್ದರು.
10ರಂದು ಅರಸೀಕೆರೆಗೆ ಸಿಎಂ ಸಿದ್ದರಾಮಯ್ಯ
ಅರಸೀಕೆರೆ: ಪಟ್ಟಣದ ಬಸವರಾಜೇಂದ್ರ ಪ್ರೌಢಶಾಲಾ ಆವರಣದಲ್ಲಿ ಏ.10ರ ಬೆಳಗ್ಗೆ 10.30ಕ್ಕೆ ಕಾಂಗ್ರೆಸ್ನ ಬೃಹತ್ ಬಹಿರಂಗ ಸಭೆ ನಡೆಯಲಿದ್ದು, ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆಂದು ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಗೊಲ್ಲರಹಳ್ಳಿ ಪಟೇಲ್ ಶಿವಪ್ಪ ತಿಳಿಸಿದ್ದಾರೆ. ಸಿಎಂ ಆಗಮನದ ಹಿನ್ನೆಲೆಯಲ್ಲಿ, ತಾಲೂಕು ಕುರುಬ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಹುಟ್ಟಿ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪುತ್ರ ಕುಮಾರಸ್ವಾಮಿ ಈ ಜಿಲ್ಲೆಗೆ ನೀಡಿರುವ ಕೊಡುಗೆ ಶೂನ್ಯ ಎಂದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಕುರುಬ ಸಮಾಜದ ಅಧ್ಯಕ್ಷ ತೊಂಡಿಗನಹಳ್ಳಿ ಕೃಷ್ಣಮೂರ್ತಿ, ತಾಪಂ ಮಾಜಿ ಅಧ್ಯಕ್ಷ ಗುರುಮೂರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ಬಾಣಾವರ ಶ್ರೀನಿವಾಸ್, ಇತರರು ಇದ್ದರು.