ಕ್ಷೇತ್ರದಲ್ಲಿ ನಾನು ನಾಪತ್ತೆಯಾಗಿರಲಿಲ್ಲ
ಕ.ಪ್ರ. ವಾರ್ತೆ , ಮೈಸೂರು ,ಏ.21
ಕಳೆದ 30 ವರ್ಷಗಳಿಂದ ನಾನು ಸ್ವಚ್ಛ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಯಾವುದೇ ಪಕ್ಷಗಳೊಂದಿಗೆ ಶಾಮೀಲಾಗಲಿ, ಹಣಕ್ಕಾಗಲಿ ರಾಜಿ ಮಾಡಿಕೊಂಡವನಲ್ಲ. ಆದರೆ, ಕೆಲವು ಮುಖಂಡರು ಹಾಗೂ ಮಾಧ್ಯಮಗಳು ನನ್ನ ರಾಜಕೀಯ ತೇಜೋವಧೆ ಮಾಡಿದವು ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಮಾಜಿ ಸಚಿವ ಎಂ.ಶಿವಣ್ಣ ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಹಾಕಿದ ಘಟನೆ ಸೋಮವಾರ ಜರುಗಿತು.
ಚಾಮರಾಜನಗರದ ಜನ ಈ ಬಾರಿ ಶಿವಣ್ಣನವರಿಗೆ ಒಂದು ಚಾನ್ಸ್ ಕೊಡೋಣ ಎಂದು ತೀರ್ಮಾನಿಸಿದ್ದರು. ನಾಮಪತ್ರ ಸಲ್ಲಿಸಿದ ದಿನದಿಂದ ಏ.17 ರವರೆಗೂ ಕ್ಷೇತ್ರಾದ್ಯಂತ ಸುತ್ತಾಡಿ ವಿಶ್ವಾಸ ಗಳಿಸಿಕೊಂಡಿದ್ದೆ. ಶಿವಣ್ಣ ಗೆದ್ದೇ ಬಿಡುತ್ತಾರೆ ಎಂದು ಮಾಧ್ಯಮದಲ್ಲಿ ವರದಿಯಾಗುತ್ತಿದ್ದಂತೆ ನಮ್ಮ ಪಕ್ಷದ ಮುಖಂಡರೂ ಸೇರಿದಂತೆ ಕೆಲವು ಮುಖಂಡರು ಷಡ್ಯಂತ್ರ ರೂಪಿಸಿ ಮಾಧ್ಯಮದಲ್ಲಿ ತಪ್ಪು ವರದಿ ಪ್ರಕಟವಾಗುವಂತೆ ನೋಡಿಕೊಂಡರು ಎಂದು ಬಿಕ್ಕಳಿಸಿ ಬಿಕ್ಕಳಿಸಿ ಅತ್ತರು.
ಈ ಚುನಾವಣೆಯಲ್ಲಿ ನನಗೆ ಮಾನಸಿಕ ಹಿಂಸೆಯಾಗಿದೆ. ನನ್ನ ರಾಜಕೀಯ ತೇಜೋವಧೆ ಮಾಡಿದ ಕೆಲವು ಮಾಧ್ಯಮಗಳ ವಿರುದ್ಧ ಕಾನೂನು ಕ್ರಮಕ್ಕೆ ಚಿಂತಿಸಿದ್ದೇನೆ. ಈ ಬಗ್ಗೆ ಕಾನೂನು ತಜ್ಞರ ಬಳಿ ಸಲಹೆ ಪಡೆಯುತ್ತೇನೆ. ನಮ್ಮ ಪಕ್ಷದವರ ವರ್ತನೆಯೂ ಸೇರಿದಂತೆ ನನ್ನ ಸಂಕಷ್ಟವನ್ನು ವರದಿ ರೂಪದಲ್ಲಿ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಸಲ್ಲಿಸುತ್ತೇನೆ. ಮೇ 16 ರಂದು ಫಲಿತಾಂಶ ಬಂದ ನಂತರ ಎಲ್ಲ ಸತ್ಯ ಹೇಳುತ್ತೇನೆ. ಒಂದು ವೇಳೆ ನಾನು ಬೇರೆ ಪಕ್ಷಗಳಿಂದ ಹಣ ಪಡೆದಿದ್ದೇನೆ ಎನ್ನುವವರು ಚಾಮುಂಡೇಶ್ವರಿ ಮೇಲೆ ಆಣೆ ಮಾಡಲಿ ಎಂದು ಸವಾಲು ಹಾಕಿದರು.
ಎಸ್‌ಎಂಕೆ ಭೇಟಿಯಾಗಿಲ್ಲ: ಚಾಮರಾಜನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಲು ಮಾಜಿ ಮುಖ್ಯಮಂತ್ರಿಯೊಬ್ಬರು ನನ್ನ ಜತೆ ಸಂಧಾನ ಮಾಡಿದ್ದಾರೆ ಎಂಬ ಪುಕಾರು ಹಬ್ಬಿಸಲಾಗಿದೆ. ನನಗೆ ವೀರಪ್ಪ ಮೊಯ್ಲಿ, ಬಿ.ಎಸ್. ಯಡಿಯೂರಪ್ಪ ಜತೆ ನಿಕಟ ಸಂಪರ್ಕವಿಲ್ಲ. ಎಸ್.ಎಂ. ಕೃಷ್ಣ ನನಗೆ ರಾಜಕೀಯ ಗುರು. ಆದರೆ, ಅವರನ್ನು ಒಂದು ವರ್ಷದಿಂದ ಭೇಟಿಯಾಗಿಲ್ಲ. ಇನ್ನು ಬಿಜೆಪಿ ಜತೆ ಶಾಮೀಲಾಗಲು ಸಾಧ್ಯವಿಲ್ಲ. ಹಿಂದೆಯೇ ಬಿಜೆಪಿಯವರು ನನ್ನನ್ನು ಸಂಪರ್ಕಿಸಿದ್ದರು. ಆಗ ಬಿಜೆಪಿಗೆ ಹೋಗಿದ್ದರೆ ಶಾಸಕನಾಗುತ್ತಿದ್ದೆ, ಸಚಿವನಾಗುತ್ತಿದ್ದೆ. ನಾನು ಎಂದೂ ಪಕ್ಷನಿಷ್ಠೆ ಬದಲಾಯಿಸದವನಲ್ಲ ಎಂದು ಸ್ಪಷ್ಟಪಡಿಸಿದರು.
ನನಗೆ ಗಂಟಲು ಬೇನೆ ತೀವ್ರ ಕಾಡಿದ್ದರಿಂದ ಡಾ.ಶ್ರೀನಿವಾಸಪ್ರಸಾದ್ ಸಲಹೆಯಂತೆ ಎರಡು ದಿನಗಳ ಕಾಲ ಯಾರ ಜತೆಯೂ ಮಾತನಾಡಲಿಲ್ಲ. ಏ.15ರ ರಾತ್ರಿ 9 ರವರೆಗೂ ಸಂತೇಮರಹಳ್ಳಿಯಲ್ಲಿ ಪ್ರಚಾರ ನಡೆಸಿದ್ದೆ. ಏ.16 ರಂದು ಎಲ್ಲಾ ಬೂತ್‌ಗಳಲ್ಲಿ ಏನೆಲ್ಲಾ ಕಾರ್ಯವಾಗಬೇಕು ಎಂಬುದರ ಬಗ್ಗೆ ಕಾರ್ಯಕರ್ತರಿಗೆ ಸೂಚನೆ ನೀಡಿದ್ದೆ. ಏ.17ರ ಬೆಳಗ್ಗೆ 8ಕ್ಕೆ ಕೃಷ್ಣಾಪುರದಲ್ಲಿ ನಾನು, ನನ್ನ ಮಗಳು ಸೇರಿದಂತೆ ಕುಟುಂದವರು ಸೇರಿದಂತೆ ಮತ ಚಲಾಯಿಸಿದೆವು. ಆದರೂ ಮಾಧ್ಯಮಗಳಲ್ಲಿ ನಾಪತ್ತೆ ಸುದ್ದಿ ಪ್ರಸಾರವಾಗುತ್ತಿದ್ದಂತೆ ನನಗೆ ಬರಬೇಕಿದ್ದ ಮತಗಳೆಲ್ಲ ಬೇರೆ ಪಕ್ಷಕ್ಕೆ ಹೋದವು. ನನ್ನ ರಾಜಕೀಯ ಜೀವನಕ್ಕೆ ಕಲ್ಲು ಹಾಕಿದವು ಎಂದು ಕಿಡಿಕಾರಿದರು.
ಕೊನೆವರೆಗೂ ಜನಸೇವೆಯಲ್ಲಿರುವೆ: ನಮ್ಮ ತಂದೆ ಆಸ್ತಿ ಮಾಡಿಕೊಟ್ಟಿದ್ದಾರೆ. ನನ್ನ ಆದಾಯಕ್ಕೆ ಏನು ಬೇಕು ಅದನ್ನು ಮಾಡಿಕೊಂಡಿದ್ದೇನೆ. ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ನಾಲ್ಕಾರು ಖಾತೆಗಳನ್ನು ನಿಭಾಯಿಸಿದ್ದೇನೆ. ಹಣ ಮಾಡಿಕೊಳ್ಳುವ ಉದ್ದೇಶ ನನಗಿದ್ದರೆ ಹಣಕಾಸು ಸಚಿವನಾಗಿದ್ದಾಗಲೇ ಮಾಡಿಕೊಳ್ಳುತ್ತಿದ್ದೆ. ಆದರೆ ನಾನು ಎಂದೆಂದಿಗೂ ಜನಸೇವೆಗಾಗಿ ಮುಡಿಪಾದವನು. ನನ್ನ ಕೊನೆ ಉಸಿರಿರುವವರೆಗೂ ಜನಸೇವೆ ಮಾಡುತ್ತೇನೆ. ಇನ್ನು 20 ವರ್ಷಗಳ ಕಾಲ ರಾಜಕೀಯ ಮಾಡಿಕೊಂಡಿರಬೇಕಾದ ನನ್ನ ಭವಿಷ್ಯಕ್ಕೆ ಕೆಲವರು ಚ್ಯುತಿ ತಂದರು. ಈ ರಾಜಕೀಯ ನಮ್ಮಂತವರಿಗಲ್ಲ ಎಂಬ ಭಾವನೆ ನನ್ನನ್ನು ಕಾಡಿದೆ ಎಂದರು.
ಚಾಮರಾಜನಗರದ ಜನ ಈ ಬಾರಿ ಶಿವಣ್ಣನವರಿಗೆ ಒಂದು ಚಾನ್ಸ್ ಕೊಡೋಣ ಎಂದು ತೀರ್ಮಾನಿಸಿದ್ದರು. ನಾಮಪತ್ರ ಸಲ್ಲಿಸಿದ ದಿನದಿಂದ ಏ.17 ರವರೆಗೂ ಕ್ಷೇತ್ರಾದ್ಯಂತ ಸುತ್ತಾಡಿ ವಿಶ್ವಾಸ ಗಳಿಸಿಕೊಂಡಿದ್ದೆ. ಶಿವಣ್ಣ ಗೆದ್ದೇ ಬಿಡುತ್ತಾರೆ ಎಂದು ಮಾಧ್ಯಮದಲ್ಲಿ ವರದಿಯಾಗುತ್ತಿದ್ದಂತೆ ನಮ್ಮ ಪಕ್ಷದ ಮುಖಂಡರೂ ಸೇರಿದಂತೆ ಕೆಲವರು ಷಡ್ಯಂತ್ರ ರೂಪಿಸಿ ಮಾಧ್ಯಮದಲ್ಲಿ ತಪ್ಪು ವರದಿ ಪ್ರಕಟವಾಗುವಂತೆ ನೋಡಿಕೊಂಡರು.
ಟಿ ಶಿವಣ್ಣ, ಮಾಜಿ ಸಚಿವ