ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗುಡುಗು, ಸಿಡಿಲಿನ ಆರ್ಭಟ

Vishwanath S
Updated On : 22 Apr 2014, 12:51 pm

ಸಕಲೇಶಪುರ: ನಾವು ಬದುಕುವುದಿಲ್ಲ ಎಂದು ಕೊಂಡಿದ್ದೆ....
ಹೀಗೆಂದವರು ಚಿಮ್ಮಿಕೂಲ ಗ್ರಾಮದ ಅನಿಲ್, ಕಾರಣ ಶನಿವಾರ ಮಧ್ಯರಾತ್ರಿ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಸುರಿದ ಮಳೆಯ ರುದ್ರನರ್ತನ ಕಂಡ ಅವರು ಜೀವಭಯದ ಅನುಭವವನ್ನು ಹೀಗೆ ವ್ಯಕ್ತಪಡಿಸಿದರು.  ಮಧ್ಯರಾತ್ರಿ 12.30ರಿಂದ 1.30ರವರೆಗೆ ಪಟ್ಟಣ ಸೇರಿದಂತೆ ಹಾನುಬಾಳು ಹೋಬಳಿಯಾದ್ಯಂತ ಗುಡುಗು ಸಿಡಿಲಿನ ಆರ್ಭಟಕ್ಕೆ ನಿದ್ರೆಯಲ್ಲಿದ್ದವರೆಲ್ಲ ಭಯದಿಂದ ಎದ್ದು ನೋಡವಂತಾಯಿತು.
ಸತತ ಒಂದು ಗಂಟೆಗಳ ಕಾಲಭಾರೀ ಪ್ರಮಾಣದಲ್ಲಿ ಗುಡುಗು, ಸಿಡಿಲು ಅಬ್ಬರಿಸಿದ್ದು ಗುಡುಗಿನ ಸದ್ದಿಗೆ ಮನೆಗಳು ಅಲುಗಿದ ಅನುಭವವಾದರೆ, ಸಿಡಿಲಿಗೆ ರಾತ್ರಿ ವೇಳೆಯು ಹಗಲಿನ ಅನುಭವ. ಸಿಡಿಲು ಕೆಲವು ನಿಮಿಷಗಳಲ್ಲಿ ಮಿಂಚಿ ಮರೆಯಾಗುವುದು ಸಾಮಾನ್ಯವಾಗಿತ್ತು ಎಂದೆನ್ನುತ್ತಿದ್ದಾರೆ ಪ್ರತ್ಯಕ್ಷದರ್ಶಿಗಳು. ಆದರೆ ರಾತ್ರಿ ಸತತ 5 ನಿಮಿಷಗಳ ಕಾಲ ಆಕಾಶದಲ್ಲೆಲ್ಲಾ ಬೆಳಕು. ಹಿಂದೆ ಎಂದು ಈ ರೀತಿಯ ಗುಡುಗು ಸಿಡಿಲಿನ ಆರ್ಭಟ ಕಂಡಿರಲಿಲ್ಲ ಎನ್ನುವುದು ಹೆಬ್ಬಸಾಲೆ ಗ್ರಾಮದ ಎಂ.ಎಚ್. ಪ್ರಕಾಶ್ ಅವರ ಮಾತು. ಒಂದು ಗಂಟೆಯ ಅವಧಿಯಲ್ಲಿ ಹಾನುಬಾಳು, ಅವರೇಕಾಡು ಸುತ್ತಮುತ್ತ 5 ಇಂಚು ಮಳೆಯಾಗಿದ್ದು, ಮಳೆಯ ರುದ್ರನರ್ತನವನ್ನು ಬಿಚ್ಚಿಡುವಂತಿದೆ.  ಒಟ್ಟಾರೆ ಸತತ ಒಂದು ವಾರದಿಂದ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಸುರಿಯುತ್ತಿರುವ ಮುಂಗಾರು ಮಳೆ ಜನರಲ್ಲಿ ದಿಗಿಲು ಮೂಡಿಸಿರುವುದು ಮಾತ್ರ ಸತ್ಯ.
ವಿಜೃಂಭಣೆಯ ಹುಲಿಕಲ್ಲು ರಥೋತ್ಸವ
ಅರಕಲಗೂಡು: ತಾಲೂಕಿನ ಹುಲಿಕಲ್ಲು ಗ್ರಾಮದ ಶ್ರೀ ಪ್ರಸನ್ನ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು. ಬೆಳಗಿನ ಜಾವದಿಂದಲೇ ಭಕ್ತಾದಿಗಳು ದೇವಾಲಯಕ್ಕೆ ತೆರಳಿ ಭಕ್ತಿಪರವಶರಾಗಿ ಪೂಜೆಗಳನ್ನು ನಡೆಸಿದರು.
ನಂತರ ದೇವಾಲಯದಿಂದ ಶ್ರೀ ಕೃಷ್ಣ ಗಂಧೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು.ನಂತರ ಸರಿಯಾಗಿ 12.58ಕ್ಕೆ ಉತ್ಸವ ಮೂರ್ತಿಯನ್ನು ರಥಾರೋಹಣ ಮಾಡಿಸಲಾಯಿತು. ನಂತರ ಅಲ್ಲಿಂದ ರಥ ಬೀದಿಗಳಲ್ಲಿ ವೇದ ಘೋಷಗಳೊಂದಿಗೆ, ಹರ್ಷೋದ್ಗಾರ ಮಾಡುತ್ತಾ ರಥ ಎಳೆಯಲಾಯಿತು. ಸಾವಿರಾರು ಭಕ್ತಾಧಿಗಳು ರಥಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಕಲೇಶಪುರ ಉಪ ವಿಭಾಗಾಧಿಕಾರಿ ಡಾ. ಮಧುಕೇಶ್ವರ್,ಅರಕಲಗೂಡು ತಹಸೀಲ್ದಾರ್ ಬಸವರಾಜ್ ಪಾಲ್ಗೊಂಡಿದ್ದರು.ಈ ವೇಳಎ ಸರ್ಕಲ್ ಇನ್ಸ್‌ಪೆಕ್ಟರ್ ರಾಜು, ಕೊಣನೂರು ಪಿ.ಎಸ್.ಐ ರಾಜು ಸೇರಿದಂತೆ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ಏರ್ಪಡಿಸಿದ್ದರು.
ಎಂಜಿನಿಯರಿಂಗ್ ಸರ್ವೀಸ್ ಪರೀಕ್ಷೆ
ಹಾಸನ: ಕೇಂದ್ರ ಸರ್ಕಾರದ ಅಧೀನದಲ್ಲಿ ಲಭ್ಯವಾಗುವ ಆಊಊ ಹಂತದ 582 ಎಂಜಿನಿಯರಿಂಗ್ ಹುದ್ದೆಗಳನ್ನು ಭರ್ತಿ ಮಾಡಲು ಯುಪಿಎಸ್ಸಿ ಜೂ. 20ರಿಂದ ದೇಶದೆಲ್ಲೆಡೆ ಎಂಜಿನಿಯರಿಂಗ್ ಸರ್ವೀಸಸ್ ಪರೀಕ್ಷೆ ನಡೆಸಲಿದೆ.  ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಷಯಗಳಲ್ಲಿ  ಎಂಜಿನಿಯರಿಂಗ್ ಪದವಿ ಹೊಂದಿದವರು ಅಥವಾ ಈ ವಿಷಯಗಳಲ್ಲಿ ಎಂಜಿನಿಯರಿಂಗ್ ಪದವಿಯ ಅಂತಿಮ ವರ್ಷದಲ್ಲಿ ಓದುತ್ತಿರುವವರು ಏ. 21ರೊಳಗೆ ಆನ್‌ಲೈನ್ ಮೂಲಕ ಅರ್ಜಿಸಲ್ಲಿಸಬಹುದು. ವಯೋವುತಿ ಕನಿಷ್ಠ 21ರಿಂದ ಗರಿಷ್ಠ 30 ವರ್ಷಗಳೊಳಗಿರಬೇಕು.
ನಿಯಮಾನುಸಾರ ವಯೋವುತಿಯಲ್ಲಿ ಸಡಿಲಿಕೆ ಇದೆ. ಶುಲ್ಕ ರೂ. 200. ಪಜಾ, ಪಪಂ, ವಿಚೇ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ವಿನಾಯಿತಿ ಇದೆ. ಹೆಚ್ಚಿನ ವಿವರಗಳಿಗೆ ಮೊ. 9845493336 ಸಂಖ್ಯೆಗೆ ಸಂಪರ್ಕಿಸಬಹುದು.
'ಉತ್ತಮ ವ್ಯಕ್ತಿತ್ವಕ್ಕೆ  ಸಕಾರಾತ್ಮಕ ಅಂಶ ಮುಖ್ಯ'
ಹಾಸನ: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಕರಾತ್ಮಕ ಅಂಶಗಳು ಬಹು ಮುಖ್ಯ ಎಂದು ಯೋಗ ಶಿಕ್ಷಕ ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರ ಸುರೇಶ್ ಗುರೂಜಿ ಹೇಳಿದರು. ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಸನ ವೇದಿಕೆ ವತಿಯಿಂದ ಸೋಮವಾರ ನಡೆದ ವಿದ್ಯಾರ್ಥಿ ಜೀವನದಲ್ಲಿ ಸಕರಾತ್ಮಕ ದೃಷ್ಟಿಕೋನದ ಉಪಯೋಗ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  ವಿದ್ಯಾರ್ಥಿಗಳು ವ್ಯಕ್ತಿತ್ವ ರೂಪಿಸಿಕೊಳ್ಳಲು ಸ್ವಯಂ ವ್ಯಕ್ತಿತ್ವ ಅತಿ ಮುಖ್ಯವಾಗಿರುತ್ತದೆ. ಸಕರಾತ್ಮಕ ಅಂಶಗಳು ಜೀವನದಲ್ಲಿ ಮುಂದೆ ಬರಲು ಸಹಕಾರಿಯಾಗುತ್ತವೆ ಎಂದರು.
ಸಮಾಜದಲ್ಲಿ ಇರುವ ಪ್ರತಿಯೊಬ್ಬರೂ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ನಕರಾತ್ಮಕ ಅಂಶಗಳು ಜೀವನದಲ್ಲಿದ್ದರೆ ಯಶಸ್ಸು ಸಾಧಿಸಲು ಸಾಧ್ಯವಿಲ್ಲವೆಂದು ಕಾಲೇಜಿನ ಪ್ರಾಂಶುಪಾಲ ಪ್ರೊ ಎಚ್.ಎನ್. ರೂಪ್ ರಾಜ್ ಚಂದನ್ ತಿಳಿಸಿದರು. ಕಾರ್ಯಕ್ರಮದಲ್ಲಿ ವ್ಯಕ್ತಿತ್ವ ವಿಕಸನ ವೇದಿಕೆ ಸಂಚಾಲಕಿ ಕೆ.ಪಿ. ಕಮಲ, ಉಪನ್ಯಾಸಕಿ ಸಾವಿತ್ರಿ ಮೂರ್ತಿ ಹಾಗೂ ಇತರರು ಇದ್ದರು.
ಖಾಸಗಿ ಜೊತೆ ಎಂಎಸ್‌ಐಎಲ್ ಶಾಮೀಲು: ಆರೋಪ
ಹಳೇಬೀಡು: ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಸಂಸ್ಥೆಯು ಬೇಲೂರು ಮದ್ಯ ಮಾರಾಟ ಅಂಗಡಿ ಖಾಸಗಿ ಅಂಗಡಿಗಳೊಂದಿಗೆ ಶಾಮೀಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇಲೂರಿನ ಜೆಕೆ ಹೋಟಲ್ ಬಳಿ ಇರುವ ಸರ್ಕಾರಿ ಮದ್ಯದ ಅಂಗಡಿಯಲ್ಲಿ ಬಹುತೇಕ ಎಲ್ಲಾ ಮಾದರಿ ಮದ್ಯ ಮಾರಾಟ ಮಾಡಬೇಕು ಎಂಬ ನಿಯಮವಿದ್ದರೂ ಕೂಡ ಇಲ್ಲಿನ ಎಂಎಸ್‌ಐಎಲ್ ಅಂಗಡಿ ಮಾಲೀಕರು ಮಾತ್ರ ತಮಗೆ ಇಷ್ಟ ಬಂದ ಮದ್ಯ ಇಡುತ್ತಾರೆ. ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ಸರ್ಕಾರಿ ಅಂಗಡಿ ಬಿಟ್ಟು ಖಾಸಗಿ ಅಂಗಡಿಯಲ್ಲಿ ದುಬಾರಿ ಹಣ ನೀಡಿ ಮದ್ಯ ಖರೀದಿ ಮಾಡುವ ಪರಿಸ್ಥಿತಿಯಾಗಿದೆ ಎಂದು ಮದ್ಯಪ್ರಿಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಶೀಘ್ರವೇ ಈ ಸಮಸ್ಯೆ ಬಗೆಹರಿಸದಿದ್ದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
'ಕೈ' ಹಿಡಿದವರಿಗೆ ವಂದನೆ: ವಿನಯ್
ಹಾಸನ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತ ನೀಡಿದ ಮತದಾರರಿಗೆ ಹಾಗೂ ಅಭ್ಯರ್ಥಿಯ ಪರ ಮತ ಕೇಳಿದ ಎಲ್ಲಾ ಕಾಂಗ್ರೆಸ್ ಮುಖಂಡರಿಗೆ ಕೆಪಿಸಿಸಿ ಸದಸ್ಯ ವಿನಯ್ ಗಾಂಧಿ ಅಭಿನಂದಿಸುವುದಾಗಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್ ಪರ ಉತ್ತಮ ಅಲೆ ಇದ್ದು, ಮತದಾರರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಗೆಲುವು ಕಾಂಗ್ರೆಸ್‌ನದ್ದಾಗಿದೆ ಎಂದ ಅವರು, ರಾಜ್ಯದ 28 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಿದ್ದು, ಹೆಚ್ಚಿನ ಸ್ಥಾನ ಪಕ್ಷಕ್ಕೆ ದೊರೆಯಲಿದೆ ಎಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳು ಕಾರ್ಯರೂಪಕ್ಕೆ ಬಂದಿದೆ. ರು. 72 ಸಾವಿರ ಕೋಟಿ ಸಾಲ ಮನ್ನಾ, ಆರ್‌ಟಿಐ ಮಾಹಿತಿ ಹಕ್ಕು ಕಾಯ್ದೆ ಅನುಷ್ಟಾನವಿಕೆಯಿಂದ ಭ್ರಷ್ಟಚಾರ ತಡೆ, ಬೀದಿ- ಬೀದಿಯ ವ್ಯಾಪಾರಿಗಳಿಗೆ ರಕ್ಷಣೆ ನೀಡುವ ಕಾನೂನು, ಭೂಸ್ವಾದೀನ ಕಾಯ್ದೆ ತಿದ್ದುಪಡಿ, ಶಿಕ್ಷಣ ಹಕ್ಕು ಕಾಯ್ದೆ, ಆಹಾರ ಭದ್ರತೆ ಕಾಯ್ದೆ ಸೇರಿದಂತೆ ನಾನಾ ಯೋಜನೆಗಳು ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಹಾಸನ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಕೈ ಸೇರಲಿದೆ ಎಂದರು.
ಲಾರಿ ಪ್ರಪಾತಕ್ಕೆ ಉರುಳಿ ಇಬ್ಬರು ಸಾವು
ಸಕಲೇಶಪುರ: ಲಾರಿ ಪ್ರಪಾತಕ್ಕೆ ಉರುಳಿ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿ ಮೂವರು ತೀವ್ರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 48ರ ಕಪ್ಪಳ್ಳಿ ಗ್ರಾಮ ಸಮೀಪ ಸೋಮವಾರ ನಡೆದಿದೆ.
ಕಡಗರವಳ್ಳಿ ಗ್ರಾಮದ ಕೃಷ್ಣ (40) ಹಾಗೂ ಲಾರಿ ಚಾಲಕ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕಸಬಾ ಗ್ರಾಮದ ರವಿ ಸರ್‌ನಾಯಕ್ (30) ಸ್ಥಳದಲ್ಲೇ ಸಾವಿಗೀಡಾದರೆ, ಕಡಗರವಳ್ಳಿ ಗ್ರಾಮದ ಪ್ರಸನ್ನ (26), ವೀರೇಶ್ (35) ಕೆಂಚ (40) ಗಾಯಗೊಂಡವರಾಗಿದ್ದಾರೆ.
ಕಪ್ಪಳ್ಳಿ ಗ್ರಾಮ ಸಮೀಪ ರೇಲ್ವೆ ಕೆಲಸ ಮುಗಿಸಿ ಗ್ರಾಮಕ್ಕೆ ಹಿಂದಿರುಗಲು ಹೆದ್ದಾರಿಯಲ್ಲಿ ಬರುತ್ತಿದ್ದ ಲಾರಿ ಹತ್ತಿದ ಕೆಲವೆ ನಿಮಿಷಗಳಲ್ಲಿ ಎದುರಿನಿಂದ ಬಂದ ಬಸ್‌ಗೆ ದಾರಿ ಕೊಡುವ ಸಂದರ್ಭದಲ್ಲಿ ಲಾರಿ, ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದೆ. ಇದರಲ್ಲಿ ಕೆಂಚ ಎಂಬಾತ ಪವಾಡ ಸದೃಶ ರೀತಿಯಲ್ಲಿ ಸಣ್ಣಪುಟ್ಟ ಗಾಯಗೊಳಿಂದಿಗೆ ಪಾರಾಗಿದ್ದರೆ, ಉಳಿದಿಬ್ಬರು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ರಕ್ತದಾನ ಶಿಬಿರ
ಬೇಲೂರು: ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಕರ್ನಾಟಕ ದಸಂಸ (ಅಂಬೇಡ್ಕರ್ ವಾದ) ತಾಲೂಕು ಘಟಕದ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ಡಾ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮತ್ತು ಉಚಿತ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ 33ಕ್ಕೂ ಹೆಚ್ಚು ಕಾರ್ಯಕರ್ತರು ರಕ್ತದಾನ ಮಾಡಿದರು. ಇಂದಿನ ಯುವಕರು ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಸಂಘಟಿತರಾಗಬೇಕೆಂದು  ದಸಂಸ ತಾಲೂಕು ಗೌರವಾಧ್ಯಕ್ಷ ಕೆ. ಸುದರ್ಶನ್ ತಿಳಿಸಿದರು.
ದಸಂಸ ವತಿಯಿಂದ ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಆಯೋ ಜಿಸಲಾಗಿದ್ದ ಉಚಿತ ರಕ್ತದಾನ ಶಿಬಿರದಲ್ಲಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರಪಂಚದಲ್ಲೇ ಉತ್ತಮವಾದ ಸಂವಿಧಾನವನ್ನು ರಚಿಸಿ ದೇಶದಲ್ಲಿನ ಪ್ರಜಾ ಪ್ರಭುತ್ವವದ ವ್ಯವಸ್ಥೆ ಪ್ರತಿ ಪ್ರಜೆಗೂ ಸಮಾನತೆಯ ಹಕ್ಕು ಸಲ್ಲುವುದಕ್ಕೆ ಕಾರಣೀಭೂತರಾದರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ದಸಂಸ ಜಿಲ್ಲಾ ಸಮಿತಿ ಕಮಲಮ್ಮ, ತಾ. ಪ್ರಧಾನ ಸಂಚಾಲಕ ಬಿ.ಎಲ್. ಲಕ್ಷ್ಮಣ್, ತಾ. ಮಹಿಳಾ ಸಂಚಾಲಕಿ ಜಯಮ್ಮ, ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಸೋಮೇಶ್  ಎಂ.ಕೆ.ಆರ್, ಗೌರವಾಧ್ಯಕ್ಷ ಭೋಜೇಗೌಡ, ದಸಂಸ ತಾ. ಉಪ ಪ್ರಧಾನ  ಸಂಚಾಲಕ ರವಿಕುಮಾರ್, ಧರ್ಮಯ್ಯ, ಹಾಲಪ್ಪ, ಸತೀಶ್ ಹೊಯ್ಸಳ, ಕೃಷ್ಣಯ್ಯ ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಮೂವತ್ತಕ್ಕೂ ಹೆಚ್ಚು ಕಾರ್ಯಕರ್ತರು ರಕ್ತದಾನ ಮಾಡಿದರು.
ಮಾನವತಾವಾದಿ
ಗೊರೂರು: ಅಂಬೇಡ್ಕರ್ ಭಾರತದ ಬೆಳಕಾಗಿದ್ದು, ಅವರು ಒಬ್ಬ ಮಹಾನ್  ಮಾನವತಾವಾದಿ ಎಂದು ಗೊರೂರು ಎಎನ್‌ವಿ ಪ್ರಥಮ ದರ್ಜೆ ಕಾಲೇಜಿನ  ಪ್ರಾಂಶುಪಾಲ ಎಂ.ಆರ್. ಚಂದ್ರಶೇಖರ್ ತಿಳಿಸಿದರು.
ಇತ್ತೀಚೆಗೆ ಗೊರೂರಿನ ಎಎನ್‌ವಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಮತ್ತು ವಿಶೇಷ ಉಪನ್ಯಾಸ  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಂಬೇಡ್ಕರ್ ಜಯಂತಿ ಕೇವಲ ಸರ್ಕಾರಿ ಕಾರ್ಯಕ್ರಮವಾಗದೇ ಓಂದು ದಿನದ ಭಾಷಣಕ್ಕೆ ಸೀಮಿತವಾಗದೆ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ತಿಳಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಜಿ.ಎನ್. ಅನುಸೂಯ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಲೋಕದ ಶಕ್ತಿ. ಇಂತಹ ಮಹಾನು ಭಾವನನ್ನು ಒಂದು  ವರ್ಗವಷ್ಟೇ ಆರಾಧಿಸಿದರೆ ಸಾಲದು. ಇಡೀ ವಿಶ್ವವೇ ಇವರ ವಿಚಾರಗಳಿಗೆ ಬದ್ಧರಾಗಿ ನಡೆದಾಗ ಮಾತ್ರ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು. ಆಂಗ್ಲ ಭಾಷಾ ಉಪನ್ಯಾಸಕ ಚಂದ್ರ ಕಾಂತ್, ಅಂತಿಮ ಬಿ.ಎ. ವಿದ್ಯಾರ್ಥಿ ಜಿ.ಆರ್. ಪ್ರತಾಪ್ ಸ್ವಾಗತಿಸಿದರು. ವಿದ್ಯಾರ್ಥಿ ಗಣೇಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement