ಬಿಜೆಪಿ ನಾಯಕರ ಮನೆಗೆ ಕಾಂಗ್ರೆಸಿಗರು ಹೋಗಿದ್ದೇಕೆ ? ಅನಂತ ಸುಬ್ಬರಾಯ ಪ್ರಶ್ನೆ
ಬೇಲೂರು: ಜೆಡಿಎಸ್ ಮತ್ತು ಬಿಜೆಪಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಒಳಒಪ್ಪಂದ ಮಾಡಿಕೊಂಡಿವೆ ಎಂದು ಹೇಳುತ್ತಾರೆ. ಆದರೆ ಬಿಜೆಪಿ ನಾಯಕರ ಮನೆ ಬಾಗಿಲಿಗೆ ಕಾಂಗ್ರೆಸ್ ನಾಯಕರು ಏಕೆ ಹೋಗಿದ್ದರು ಎಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ತೊ.ಚ. ಅನಂತಸುಬ್ಬರಾಯ ಪ್ರಶ್ನಿಸಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು, ಜೆಡಿಎಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್ ಸೋಲಿಸುವ ಹುನ್ನಾರ ಮಾಡಿದ್ದಾರೆ ಎಂದು ದೂರಿದ್ದಾರೆ. ಆದರೆ ಬಿಜೆಪಿ ನಾಯಕ ಬಿ.ಬಿ.ಶಿವಪ್ಪ ಅವರ ಮನೆಗೆ ಕಾಂಗ್ರೆಸ್ ದಂಡು ಏಕೆ ಹೋಗಿತ್ತು ಎಂಬ ಬಗ್ಗೆ ಉತ್ತರ ನೀಡಬೇಕು ಎಂದು ತೀರುಗೇಟು ನೀಡಿದರು.
ತೀವ್ರ ವಾಗ್ದಾಳಿ: ತೃತೀಯ ರಂಗ ದೇಶದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂಬ ಕಾರಣದಿಂದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆಣತೆ ಮೇರೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಸೋಲಿಸುವ ಮತ್ತು ತೃತೀಯರಂಗ ಅಧಿಕಾರಕ್ಕೆ ಬರದಂತೆ ತಡೆಯುವ ವ್ಯವಸ್ಥಿತ ಹುನ್ನಾರ ಮಾಡಿಕೊಂಡಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಅಭಿನಂದನೆ: ಹಾಸನ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಅಧಿಕ ಮತದಿಂದ ಗೆಲ್ಲುತ್ತಾರೆ. ಇದರ ಬಗ್ಗೆ ಯಾವ ಸಂಶಯ ಬೇಡವೆಂದ ಅವರು, ಕಳೆದ ಚುನಾವಣೆಯಲ್ಲಿ ಹಗಲು, ಇರುಳು ದುಡಿದ ಜೆಡಿಎಸ್ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.
ಸಾಧನೆಯೇ ಶ್ರೀರಕ್ಷೆ: ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಡಿ. ಚಂದ್ರೇಗೌಡ ಮಾತನಾಡಿ, ಜೆಡಿಎಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದರೆ, ಜೆಡಿಎಸ್ ಏಕೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಕಾಂಗ್ರೆಸ್‌ಗೆ ಸೋಲಿನ ಭೀತಿ ಇದೆ. ಹಾಗಾಗಿ, ಇಂಥ ಹೇಳಿಕೆ ನೀಡುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಜಿಲ್ಲೆಗೆ ಮಾಡಿದ ಅಭಿವೃದ್ಧಿ ಸಾಧನೆ ಅವರ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದರು.
ಲೇವಡಿ: ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎ. ನಾಗರಾಜು ಮಾತನಾಡಿ, ರಾಜ್ಯ ಕಾಂಗ್ರೆಸ್ ದಂಡು ಹಾಸನಕ್ಕೆ ಬಂದು ಜೆಡಿಎಸ್ ನಿರ್ನಾಮ ಮಾಡುವುದಾಗಿ ಹೇಳಿದೆ. ಕಾಂಗ್ರೆಸ್ ನಾಯಕರಿಗೆ ಒಂದು ರೀತಿಯಲ್ಲಿ ಭ್ರಾಂತಿ ಆವರಿಸಿದೆ ಎಂದು ಲೇವಡಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಕೆ.ಎಸ್. ಲಿಂಗೇಶ್, ಹೆಬ್ಬಾಳು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮಾಜಿ ಸದಸ್ಯ ಸಿದ್ದೇಗೌಡ, ನಟರಾಜ್, ಗಣೇಶ್, ಪುರಸಭಾ ಅಧ್ಯಕ್ಷ ಬಿ. ಗಿರೀಶ್, ಸದಸ್ಯ ಶ್ರೀನಿಧಿ, ತಜ್‌ಮಲ್ ಪಾಷ, ಫಾರುಕ್, ಸಿ.ಎಸ್.ಪ್ರಕಾಶ್, ಮಹೇಶ್ ಇತರರು ಇದ್ದರು.