'ಸಮಾನ ಶಿಕ್ಷಣ ನೀತಿ ಜಾರಿಯಾಗಲಿ'
ಬೇಲೂರು: ರಾಜ್ಯದಲ್ಲಿ ಸಮಾನ ಶಿಕ್ಷಣ ನೀತಿ ಜಾರಿಯಾದಾಗ ಮಾತ್ರ ಬಡವ ಶ್ರೀಮಂತರೆನ್ನದೇ ಒಂದೇ ರೀತಿಯ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುವುದರಿಂದ ಶಿಕ್ಷಣದಲ್ಲಿ ಸಮಾನತೆ ಕಾಣಲು ಸಾಧ್ಯ ಎಂದು ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಬಿ.ಎನ್. ಜಗದೀಶ್ ತಿಳಿಸಿದರು.
ಪಟ್ಟಣದ ಬಯಲು ರಂಗಮಂದಿರದಲ್ಲಿ ತಾಲೂಕು ಜಯಕರ್ನಾಟಕ ಸಂಘಟನೆ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಹಬ್ಬದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಯಕರ್ನಾಟಕ ಸಂಘಟನೆ ಸಾರ್ವಜನಿಕರ ಸೇವೆಗಾಗಿಯೇ ಹೊರತು ರಾಜಕೀಯ ಮಾಡುವುದಕ್ಕಲ್ಲ ಎಂದರು.
ಜನಸೇವೆ ಮಾತ್ರ: ನಮ್ಮ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಅವರು ರಾಜಕೀಯಕ್ಕೆ ಬರುವುದಾದರೆ ಎಂದೋ ಬರಬಹುದಿತ್ತು. ಅವರ ವರ್ಚಸ್ಸಿನಿಂದ ರಾಜಕೀಯದಲ್ಲಿ ಬೆಳೆಯುವುದು ಕಷ್ಟವಾಗುತ್ತಿರಲಿಲ್ಲ. ಆದರೆ ಅವರ ಉದ್ದೇಶ ಜನರ ಸೇವೆ ಮಾತ್ರ ಎಂದು ಹೇಳಿದರು.
ಉತ್ತಮ ಬೆಳವಣಿಗೆ: ವಿಶ್ವ ವಿಖ್ಯಾತ ಬೇಲೂರು ತಾಲೂಕು ಹಲವು ಅಭಿವೃದ್ಧಿಗಳಿಂದ ಹಿಂದೆ ಬಿದ್ದಿದ್ದ ಸಂದರ್ಭದಲ್ಲಿ ತಾಲ್ಲೂಕು ಜಯ ಕನಾಟಕ ಸಂಘಟನೆ ವತಿಯಿಂದ ಹಲವಾರು ಬಾರಿ ಹೋರಾಟ ಮಾಡುವ ಮೂಲಕ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಚುರುಕು ಮುಟ್ಟಿಸಿ ಕೆಲಸ ಮಾಡಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ವೈಜ್ಞಾನಿಕ ಬೆಲೆ ಸಿಗಬೇಕು: ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಭ್ರಷ್ಟಾಚಾರ ಹಗರಣಗಳನ್ನು ಬಯಲಿಗೆಳೆಯುತ್ತಿರುವುದರಿಂದ ಜನರಲ್ಲಿ ಜಾಗೃತಿ ಮೂಡುತ್ತಿದೆ. ರೈತರ ಜೀವನ ಸಂಕಷ್ಟದಿಂದ ಕೂಡಿದ್ದು ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಯಾಗಬೇಕು ಎಂದು ತಿಳಿಸಿದರು.
ಜಯ ಕರ್ನಾಟಕ ಸಂಘಟನೆಯ ರಾಜ್ಯ ಗೌರವಾಧ್ಯಕ್ಷ ದೀಪಕ್, ರಾಜ್ಯ ಉಪಾಧ್ಯಕ್ಷ ರಾಮಚಂದ್ರಯ್ಯ, ಜಿಲ್ಲಾ ಉಪಾಧ್ಯಕ್ಷ ಸೋಮೇಶ್, ಎಂ.ಕೆ.ಆರ್. ತಾಲೂಕು ಅಧ್ಯಕ್ಷ ಅರುಣ್ ಕುಮಾರ್, ಗೌರವಾಧ್ಯಕ್ಷ ವಿ.ಎಸ್. ಬೋಜೇಗೌಡ, ನಗರಾಧ್ಯಕ್ಷ ಬಿ.ಎಲ್. ಲಕ್ಷ್ಮಣ್, ತಾಲೂಕು ಸಾಂಸ್ಕೃತಿಕ ಘಟಕದ ಅಧ್ಯಕ್ಷ ಕೇಬಲ್ ವಿಜಯ್ ಕುಮಾರ್, ತಾಲೂಕು ಯುವ ಅಧ್ಯಕ್ಷ ಶಿವರಾಜ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಮಾನ್ ಪಾಷಾ, ತಾಲೂಕು ಉಪಾಧ್ಯಕ್ಷ ಅಕ್ಕಿರಾಜು, ಟೈಲ್ ಗಿರೀಶ್, ಜಯಪ್ರಕಾಶ್, ತಿಪ್ಪೇಸ್ವಾಮಿ ಇತರರು ಇದ್ದರು.