ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಎಸಿ ವಿರುದ್ಧ ಲಾರಿ ಮಾಲೀಕರ ಮುನಿಸು

Vishwanath S
Updated On : 23 Apr 2014, 12:46 pm

ಸಕಲೇಶಪುರ: ಅಕ್ರಮ ಮರಳು ತಡೆಗಟ್ಟುವಂತೆ ಮನವಿ ನೀಡಲು ಹೋದ ಆಲೂರು-ಸಕಲೇಶಪುರ ಮರಳು ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳನ್ನು ಉಪವಿಭಾಗಧಿಕಾರಿ ಮಧುಕೇಶ್ವರ ಏಕ ವಚನದಲ್ಲಿ ನಿಂದಿಸಿದ್ದರೆಂದು ಆರೋಪಿಸಿ ಉಪವಿಭಾಗಧಿಕಾರಿ ವಿರುದ್ದ ಅವರ ಕಚೇರಿ ಎದುರು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆಯಿತು.
ಘಟನೆ ಹಿನ್ನೆಲೆ: ಆಲೂರು-ಸಕಲೇಶಪುರ ತಾಲೂಕು ವ್ಯಾಪ್ತಿಯಲ್ಲಿ ಹರಿಯುತ್ತಿರುವ ಹೇಮಾವತಿ ನದಿಯಲ್ಲಿ ಮರಳು ತೆಗೆಯಲು ಅವಕಾಶ ನೀಡಿಲಾಗಿದ್ದು, ಇದಕ್ಕಾಗಿ ಆಲೂರು ಸಕಲೇಶಪುರ ವ್ಯಾಪ್ತಿಯಲ್ಲಿ ಸುಮಾರು 400ಕ್ಕೂ ಅಧಿಕ ಲಾರಿಗಳಿಗೆ ಜಿಪಿಎಸ್ ಆಳವಡಿಸಲಾಗಿದ್ದು, ಕೇವಲ 8 ಕ್ಯೋಬಿಕ್ ಮೀಟರ್ ಮರಳು ಸಾಗಿಸುವಂತೆ ಲಾರಿಯ ಬಾಡಿಯನ್ನು ತುಂಡರಿಸಲಾಗಿದೆ. ಆದರೆ ಮರಳು ಕೇಂದ್ರಗಳಲ್ಲಿ ಜಿಪಿಎಸ್ ಆಳವಡಿಸಿರುವ ಈ ಲಾರಿಗಳಿಗೆ ಕಳಪೆ ಗುಣಮಟ್ಟದ ಮರಳು ನೀಡಲಾಗುತ್ತಿದೆ.
ಆದರೆ, ರಾತ್ರಿ ಹಗಲನ್ನದೆ ಅನಧಿಕೃತವಾಗಿ ಮರಳು ಸಾಗಾಟ ಲಾರಿಗಳಿಗೆ ಉತ್ತಮ ಮರಳು ದೊರೆಯುತ್ತಿದ್ದು, ಕನಿಷ್ಟ 15ರಿಂದ 16 ಕ್ಯೂಬಿಕ್ ಮೀಟರ್ ಮರಳು ಸಾಗಿಸಲಾಗುತ್ತಿದೆ. ಇದರಿಂದಾಗಿ ಮರಳು ಮಾರುಕಟ್ಟೆಯಲ್ಲಿ ಜಿಪಿಎಸ್ ಲಾರಿಯಲ್ಲಿ ಸಾಗಿಸಲಾಗುವ ಮರಳು ಮಾರಾಟವಾಗದೆ ಹಾಗೇ ಉಳಿಯುತ್ತಿದ್ದು, ಪ್ರತಿನಿತ್ಯ ನಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ತಾಲೂಕಿನಾದ್ಯಂತ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಮರಳು ಲಾರಿಯನ್ನು ತಡೆಹಿಡಿಯಬೇಕು ಎಂಬ ಕೂಗದ್ದಿದೆ.
ಅಕ್ರಮ ಮರಳು ಸಾಗಣೆ ತಡೆಗಟ್ಟುವಂತೆ ಒತ್ತಾಯಿಸಿ ಮನವಿಯನ್ನು ಉಪವಿಭಾಗಾಧಿಕಾರಿಗೆ ನೀಡಲು ಸಂಘದ ಪದಾಧಿಕಾರಿಗಳು ಉಪವಿಭಾಗಧಿಕಾರಿ ಕಚೇರಿ ಪ್ರವೇಶಿಸಿದ್ದರು.
ಈ ವೇಳೆ ಪದಾಧಿಕಾರಿಗಳೊಂದಿಗೆ ಏಕವಚನದಲ್ಲಿ ಮಾತನಾಡಿದ ಉಪವಿಭಾಗಾಧಿಕಾರಿ ಮಧುಕೇಶ್ವರ್, ಮರಳು ಲಾರಿ ಮಾಲೀಕರನ್ನು ಕಚೇರಿಯಿಂದ ಹೊರಗಡೆ ಹಾಕುವಂತೆ ಏರುದ್ವನಿಯಲ್ಲಿ ತಮ್ಮ ಸಹಾಯಕರಿಗೆ ಸೂಚಿಸಿದ್ದಾರೆ. ನಾವು ನಿಮ್ಮ ಕೆಲಸದಾಳುಗಳಲ್ಲ ಎಂದು ಅವಮಾನಕರ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕಚೇರಿ ಮುಂಭಾಗ ಜಮಾಯಿಸಿದ ನೂರಾರು ಲಾರಿಮಾಲೀಕರು ಉಪವಿಭಾಗಧಿಕಾರಿ ವಿರುದ್ದ ಘೋಷಣೆ ಕೂಗಲಾರಂಭಿಸಿದರು.
ಆರೋಪ: ಅಕ್ರಮ ಮರಳು ಮಾಫಿಯಾದಲ್ಲಿ ಉಪವಿಭಾಗಾಧಿಕಾರಿಯ ಕೈವಾಡವಿದ್ದು ಪ್ರತಿದಿನ ಉಪವಿಭಾಗಾಧಿಕಾರಿಗಳ ಹೆಸರಿನಲ್ಲಿ ನಾಲ್ಕು ಲಾರಿಗಳು ಮರಳು ನಿಯಮಗಳನ್ನು ಮೀರಿ ಮರಳು ಸಾಗಟ ಮಾಡುತ್ತಿವೆ. ಈ ಲಾರಿಗಳೂ ಸಹ ಬೆಂಗಳೂರಿಗೆ ಮರಳು ಸಾಗಿಸುತ್ತಿವೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಉಪವಿಭಾಗಾಧಿಕಾರಿಗಳು ಉಡಾಫೆಯಿಂದ ವರ್ತಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕಚೇರಿಯಿಂದ ಹೊರಬಂದ ಉಪವಿಭಾಗಧಿಕಾರಿ, ನಾನು ಯಾರನ್ನೂ ಏಕವಚನದಲ್ಲಿ ನಿಂದಿಸಿಲ್ಲ ಎಂದು ಪ್ರತಿಭಟನಕಾರರ ಮನವೊಲಿಸಲು ಪ್ರಯತ್ನ ನಡೆಸಿದರಾದರೂ ಪ್ರತಿಭಟನಾಕಾರರು ಉಪವಿಭಾಗಧಿಕಾರಿ ಮಾತನ್ನು ಒಪ್ಪದೆ ಪ್ರತಿಭಟನೆ ಮುಂದುವರಿಸಿದರು.
ಈ ಸಂದರ್ಭದಲ್ಲಿ ಮತ್ತೆ ಮಾತನಾಡಿದ ಉಪವಿಭಾಗಧಿಕಾರಿ ಮರಳು ಲಾರಿ ಮಾಲೀಕರು ಹಾಗೂ ನನ್ನ ನಡುವೆ ಸಂಪರ್ಕದ ಕೊರತೆಯಿಂದ ಈ ಸಮಸ್ಯೆ ಉದ್ಭವಿಸಿದೆ. ಮುಂದಿನ ದಿನಗಳಲ್ಲಿ ಅಕ್ರಮ ಮರಳು ಲಾರಿಗಳನ್ನು ತಡೆಗಟ್ಟಲು ಅಧಿಕಾರಿಗಳ ಸಭೆ ನಡೆಸಲಾಗುವುದು. ಅದುವರಗೆ ಅಕ್ರಮ ಮರಳು ಸಾಗಟ ಕಂಡು ಬಂದರೆ ತಿಳಿಸುವಂತೆ ಸೂಚಿಸುವ ಮೂಲಕ ಪ್ರತಿಭಟನಕಾರರನ್ನು ಮನವೊಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement