ನಾಯಿ ಬಾಯಿ ಮುಚ್ಚಲು ಕ್ರಮ
ಹಾಸನ: ಬೀದಿ ನಾಯಿಗಳು ಹಾಗೂ ಬಿಡಾಡಿ ದನಗಳ ಹಾವಳಿಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಮುಂದಾಗಿದ್ದು, ಪ್ರಾಯೋಗಿಕವಾಗಿ ಮಂಗಳವಾರ ಎನ್ಜಿಒ ಸಂಸ್ಥೆ ಹಾಗೂ ಸಮಾಜ ಸೇವಕರೊಂದಿಗೆ ಚರ್ಚೆ ನಡೆಸಲಾಯಿತು.
ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ನೇತೃತ್ವದಲ್ಲಿ ಚರ್ಚೆ ನಡೆಸಲು ಎನ್ಜಿಒ ಸಂಸ್ಥೆ ಪ್ರಾಣಿ ದಯಾಸಂಘ, ಹಿರಿಯ ನಾಗರಿಕರು, ಸಮಾಜ ಸೇವಕರೊಂದಿಗೆ ಚರ್ಚೆ ನಡೆಸಲಾಯಿತು.
ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿ ಮಕ್ಕಳ ಮೇಲೆ ದಾಳಿ ಮಾಡುತ್ತಿವೆ. ನಗರದ ಸರಸ್ವತಿಪುರಂ ನಲ್ಲಿ ಶಿವಕುಮಾರ್ ಹಾಗೂ ದಿನೇಶ್ ಎಂಬವರ ಇಬ್ಬರು ಮಕ್ಕಳು ಮನೆಯ ಮುಂದೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಬೀದಿ ನಾಯಿಗಳು ಏಕಾಏಕಿ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿವೆ. ಈ ಹಿನ್ನೆಲೆಯಲ್ಲಿ, ನಗರದಲ್ಲಿ ಬೀದಿನಾಯಿಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಿರುವ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಪ್ರಾಯೋಗಿಕವಾಗಿ ಚರ್ಚೆ ನಡೆಸಿತು.
ಡಿಸಿ ಪ್ರಶ್ನೆ: ಎನ್ಜಿಒ ಸಂಸ್ಥೆಯು ಬೀದಿ ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಸಲುವಾಗಿ 8 ಎಕರೆ ಜಾಗವನ್ನು ಶಾಂತಿಗ್ರಾಮದ ಸಮೀಪ ಕೇಳಿದ್ದಾರೆ. ಆ ಬಗ್ಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿರುವುದಾಗಿ ಹೇಳಿದ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಅವರು, ಸದ್ಯಕ್ಕೆ ತಾತ್ಕಲಿಕವಾಗಿ ಜಿಲ್ಲಾಡಳಿತದಿಂದ 10 ಗುಂಟೆ ಜಾಗ ನೀಡಲಾಗುತ್ತದೆ. ಜೊತೆಗೆ ಬೀದಿ ನಾಯಿಗಳನ್ನು ಹಿಡಿದು ನೀಡಲಾಗುತ್ತದೆ. ಆದರೆ ಎನ್ಜಿಒ ಮತ್ತು ಪ್ರಾಣಿ ದಯಾ ಸಂಘದವರ ಕರ್ತವ್ಯ ಏನು ಎಂದು ಪ್ರಶ್ನಿಸಿದರು.
ಶೀಘ್ರ ತೀರ್ಮಾನ: ಈ ಬಗ್ಗೆ ಏಕಾಏಕಿ ತೀರ್ಮಾನವನ್ನು ಕೈಗೊಳ್ಳಲು ಸಾಧ್ಯವಿಲ್ಲ. ಆದ್ದರಿಂದ 2 ದಿನಗಳ ನಂತರ ನಗರಸಭೆ, ಪೊಲೀಸ್ ಇಲಾಖೆ, ಪಶು ಕಾಲೇಜು ಸೇರಿದಂತೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಮನವಿ: ಸಮಾಜ ಸೇವಕ ಹಾಗೂ ಗುರುರಾಜ್ ಹೆಬ್ಬಾರ್ ಮಾತನಾಡಿ, ಜಾಗ ಕೊಟ್ಟು ನಾಯಿಗಳನ್ನು ನಗರಸಭೆಯವರು ಹಿಡಿದುಕೊಟ್ಟರೆ ನಾವು ಅದಕ್ಕೆ ಆಪರೇಷನ್ ಮಾಡುತ್ತೇವೆ. ನಂತರ ಅದನ್ನು 5 ದಿನಗಳ ನೋಡಿಕೊಳ್ಳಬೇಕಾಗುತ್ತದೆ. ಆ ಜವಾಬ್ದಾರಿಯನ್ನು ನಾವು ವಹಿಸಿಕೊಳ್ಳುತ್ತೇವೆ. ನಾವು ಕೇಳಿರುವ 8 ಎಕರೆ ಜಾಗ ಮಂಜೂರು ಆಗುವವರೆಗೆ ತಾತ್ಕಾಲಿಕವಾಗಿ ತಮಗೆ ಜಾಗ ನೀಡುವಂತೆ ಜಿಲ್ಲಾಧಿಕಾರಿಯನ್ನು ಕೇಳಿಕೊಂಡರು.
ಡಿಸಿ ಭರವಸೆ: ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅನ್ಬುಕುಮಾರ್, ಈಗಾಗಲೇ ಸರ್ಕಾರಿ ಭೂಮಿ ಮಂಜೂರಾತಿಗೆ ಬರೆದಿದ್ದು, ತಾತ್ಕಾಲಿಕವಾಗಿ 10 ಗುಂಟೆ ಜಾಗ ನೀಡಲಾಗುತ್ತದೆ. ಒಟ್ಟಿನಲ್ಲಿ ಬೀದಿ ನಾಯಿಗಳ ಹಾವಳಿಯನ್ನು ನಗರದಲ್ಲಿ ತಪ್ಪಿಸಬೇಕು. ಆದ್ದರಿಂದ ಕಾನೂನು ರೀತಿಯಲ್ಲಿ ಮಾಡಬೇಕಾದ ವ್ಯವಸ್ಥೆ ಕೈಗೊಳ್ಳಲು ಇನ್ನೆರೆಡು ದಿನಗಳಲ್ಲಿ ಅಧಿಕಾರಿಗಳ ಸಭೆಯನ್ನು ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ. ಅಲ್ಲಿಯವರೆಗೆ ನಾಯಿಗಳ ಹಾವಳಿಗೆ ಕ್ರಮಕೈಗೊಳ್ಳುವಂತೆ ನಗರಸಭೆ ಆಯುಕ್ತರಿಗೆ ಸೂಚಿಸುವುದಾಗಿ ಹೇಳಿದರು.
ಅಲ್ಲದೇ, ಇನ್ನು ಮುಂದೆ ನಾಯಿಗಳನ್ನು ಸಾಕುವವರು ಕಡ್ಡಾಯವಾಗಿ ಪರವಾನಗಿ ಪಡೆಯುವ ವ್ಯವಸ್ಥೆ ಕೈಗೊಳ್ಳಲಾಗುತ್ತದೆ. ಈಗಾಗಲೇ ಈ ಕಾಯ್ದೆ ಇದ್ದರೂ ಸಹ ಅದು ಸಮರ್ಪಕವಾಗಿ ನೀಡಲಾಗುತ್ತದೆ. ಅದನ್ನು ಕಡ್ಡಾಯಗೊಳಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ, ಉಪಾಧ್ಯಕ್ಷ ಇರ್ಷಾದ್ ಪಾಷ, ವೈದ್ಯ ಸೌಮ್ಯ ದಿನೇಶ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ ಹಾಗೂ ಇತರರು ಇದ್ದರು.
ಅನೌಪಚಾರಿಕ ಸಭೆ ಇಂದು
ಹಾಸನ: ನಗರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣದ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಅನೌಪಚಾರಿಕ ಸಭೆ ಕರೆಯಲಾಗಿದೆ. ಪ್ರಸ್ತುತ ಲೋಕಸಭಾ ಚುನಾವಣೆ 2014ರ ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಮಾ. 23 ರಂದು ಬೆಳಗ್ಗೆ 11ಕ್ಕೆ ನಗರಸಭೆಯ ರಾಷ್ಟ್ರಕವಿ ಕುವೆಂಪು ಸಭಾಂಗಣದಲ್ಲಿ ನಗರಸಭೆಯ ಅಧ್ಯಕ್ಷರು, ಉಪಾದ್ಯಕ್ಷರು ಹಾಗೂ ಸದಸ್ಯರನ್ನು ಒಳಗೊಂಡ ಅನೌಪಚಾರಿಕ ಸಭೆ ನಡೆಯಲಿದೆ.