ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಮಾನವ ಹಕ್ಕು ಪ್ರತಿಪಾದಕ ಅಂಬೇಡ್ಕರ್‌'

Vishwanath S
Updated On : 23 Apr 2014, 12:47 pm

ಹಾಸನ:  ಅಂಬೇಡ್ಕರ್ ಜನ್ಮ ದಿನಾಚರಣೆಯ ದಿನ ನಮ್ಮ ನೆನಪಿಗೆ ಬರುವ ಪ್ರಮುಖ ವಿಷಯಗಳೆಂದರೆ ಸಂವಿಧಾನ, ಅಸ್ಪಶ್ಯತೆ, ಮೀಸಲಾತಿ ಹಾಗೂ ಧರ್ಮಗಳಾಗಿವೆ. ಅಂಬೇಡ್ಕರ್ ತಮ್ಮ ಬಾಲ್ಯ ಹಾಗೂ ಶಾಲಾದಿನಗಳಲ್ಲಿ ಜಾತಿ ವ್ಯವಸ್ಥೆ, ಚತುವರ್ಣ ಮೂಲಕ ಅನುಭವಿಸಿದ ವೇದನೆ, ಅಪಮಾನ ಅಪಾರ. ದೀನದಲಿತರ- ನಿಮ್ನ (ಕೆಳ) ವರ್ಗದವರ ಮೇಲೆ ನಿರಂತರವಾಗಿ ನಡೆಯುತ್ತಿದ್ದ ಶೋಷಣೆಯಿಂದ ರೋಸಿ ಹೋಗಿದ್ದರು. ಅಸ್ಪೃಶ್ಯತೆ ಹಾಗೂ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿ ಸಾಧನೆ ಗೈದರು ಎಂದು ನಗರದ ಸರ್ಕಾರಿ ಕಲಾ ಕಾಲೇಜಿನ ಸಹ ಪ್ರಾಧ್ಯಪಕ ಟಿ.ಪಿ. ಪುಟ್ಟರಾಜು ಹೇಳಿದರು.
ಅವರು ಕಲಾ ಕಾಲೇಜು ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ತನ್ನ ವರ್ಗದವರಿಗೆ ಆಗುತ್ತಿದ್ದ ನೋವು- ಅಪಮಾನ ತಪ್ಪಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ತರಲು ಅವಿರತ ಪ್ರಯತ್ನಿಸಿದರು. ಹಿಂದೂ ಧರ್ಮದ ಕಂದಾಚಾರಗಳಿಂದ ಬೇಸತ್ತು ಬೌದ್ಧದರ್ಮ ಸ್ವೀಕರಿಸಿದರು ಎಂದರು.
ಸೂಕ್ತ ಮಾರ್ಗ ಅಳವಡಿಸಿ: ಪ್ರೊ.ಡಿ.ಜಿ. ಕೃಷ್ಣೇಗೌಡ ಮಾತನಾಡಿ, ಆಚರಣೆಗಳು ಕೇವಲ ಸಾಂಕೇತಿಕ ವಾಗಬಾರದು. ವಿಶಾಲವಾದ ಮನೋಭಾವದಿಂದ ಅಂಬೇಡ್ಕರ್ ತತ್ವ ವಿಚಾರಗಳನ್ನು ಅನುಸರಿಸಬೇಕು. ಅವರು ಮಾನವ ಹಕ್ಕುಗಳ ಪ್ರತಿಪಾದಕರಾಗಿದ್ದಾರೆ. ಅವರು ಕೇವಲ ಒಂದು ವರ್ಗಕ್ಕೆ ಸೀಮಿತರಲ್ಲ. ಅವರ ತತ್ವ- ಚಿಂತನೆಗಳನ್ನು ನವೀಕರಿಸಿ ಸರಿಯಾದ ಮಾರ್ಗದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವಿಚಾರ ಪ್ರತಿಪಾದನೆ: ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಐ.ಎಂ. ಮೋಹನ್ ಮಾತನಾಡಿ,  ನಮ್ಮೆಲ್ಲಾ  ಆದರ್ಶ- ಪ್ರತಿಷ್ಠೆಗಳನ್ನು ಪಕ್ಕಕ್ಕಿಟ್ಟು ಯೋಚಿಸಿದರೆ ಅಂಬೇಡ್ಕರ್ ವ್ಯಕ್ತಿತ್ವದ ಸಂಪೂರ್ಣ ಪರಿಚಯ ನಮಗಾಗುತ್ತದೆ. ನಿರಂತರ ದೀರ್ಘ ಅಧ್ಯಯನದ ಮೂಲಕ ತಮ್ಮ ವಿಚಾರ- ಸಿದ್ಧಾಂತಗಳನ್ನು ಪ್ರತಿಪಾದಿಸಿದರು.
ನಮ್ಮೆಲ್ಲರ ಜವಾಬ್ದಾರಿ: ಭಾರತ ಸಂವಿಧಾನದಲ್ಲಿ ಸಾರ್ವತ್ರಿಕ ಶಿಕ್ಷಣ ಮತ್ತು ಮತದ ಹಕ್ಕನ್ನು ಅಳವಡಿಸಿದ್ದಾರೆ. ಭಾರತೀಯರೆಲ್ಲರೂ ಶಿಕ್ಷಣ ಪಡೆದು ವಿವೇಚನಾವಂತರಾಗಿ ಕಲುಷಿತಗೊಂಡಿರುವ ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆಗೆ ಕಾಯಕಲ್ಪ ತರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳಾದ ದೊರೆಸ್ವಾಮಿ ಹಾಗೂ ರಾಮ್ ಕುಮಾರ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರ, ತತ್ವಗಳ ಬಗ್ಗೆ ಮಾತನಾಡಿ ಪ್ರಬಂಧ ಮಂಡಿಸಿದರು. ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಿ.ಬಿ. ಚನ್ನಬಸಪ್ಪ ಅಧ್ಯಾಪಕರು ಹಾಗೂ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಇದ್ದರು.
ವಿದ್ಯಾರ್ಥಿಗಳಾದ ಶೃತಿ ಪ್ರಾರ್ಥಿಸಿದರು. ರವಿನಂದನ್ ಸ್ವಾಗತಿಸಿಸರು. ಕೆ.ಕೆ. ರವಿಕಿರಣ್ ವಂದಿಸಿದರು. ಅವಿನಾಶ್ ಹಾಗೂ ಉಷಾ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement