ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಾಜಾಕಾಲುವೆಯಲ್ಲಿ ಕಲುಷಿತ ನೀರು

Vishwanath S
Updated On : 23 Apr 2014, 12:47 pm

ಅರಸೀಕೆರೆ: ಶತಮಾನಗಳ ಇತಿಹಾಸದ ರಾಜಾಕಾಲುವೆ ಇಂದು ಕಲುಷಿತ ನೀರಿನ ಸಂಗ್ರಹವಾಗಿ ಮಾರ್ಪಾಟಾಗಿದ್ದು, ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕಾದ ಪುರಸಭೆ ಮೌನಕ್ಕೆ ಶರಣಾಗಿರುವುದರ ಬಗ್ಗೆ ಸಾರ್ವಜನಿಕರು ಆರೋಪಿಸಿದ್ದಾರೆ.
ಇತ್ತೀಚಿಗೆ ಪುರಸಭೆ ಕಚೇರಿಯ ಪಕ್ಕದಲ್ಲಿನ ಪಂಪ್ ಹೌಸ್ ಮುಂಭಾಗದಲ್ಲಿ ಚರಂಡಿಗಳಲ್ಲಿ ಕಲುಷಿತ ನೀರು ಹರಿದು ನಾಗರಿಕರಿಗೆ ಅಸಹನೀಯ ದುರ್ವಾಸನೆ ಉಂಟುಮಾಡಿತ್ತು. ಆಗ ಜಾಗೃತರಾದ ಅಧಿಕಾರಿಗಳು ಕಲುಷಿತ ನೀರನ್ನು ಹೊರ ಹಾಕುವ ಪ್ರಯತ್ನ ನಡೆಸಿದ್ದರು. ಆಗ ಅವರಿಗೆ ಹೊಳೆದದ್ದೇ ರಾಜಾಕಾಲುವೆ.
ವಾಮಮಾರ್ಗ: ಪುರಸಭೆ ಕಚೇರಿ ಪಕ್ಕದಲ್ಲಿನ ಚರಂಡಿಗಳಲ್ಲಿನ ದುರ್ವಾಸನೆ ನೀರನ್ನು ರಾಜಾಕಾಲುವೆಗೆ ಹರಿಸಿ, ಸದ್ಯದ ಪರಿಸ್ಥಿತಿಯಿಂದ ಪಾರಾಗುವುದು ಅವರ ಉದ್ದೇಶವಾಗಿತ್ತು. ಆದರೆ, ಈ ಪ್ರಯತ್ನದ ಫಲದಿಂದ ಮುಂದೆ ಸೃಷ್ಟಿಯಾಗಬಹುದಾದ ಅನಾಹುತಗಳನ್ನು ಅಂದಾಜು ಆಗ ಅಧಿಕಾರಿಗಳು ಮಾಡಿರಲಿಲ್ಲ. ಅಧಿಕಾರಿಗಳು ಆಗ ಮಾಡಿದ ಆ ಪ್ರಮಾದದಿಂದ ನಾಗರಿಕರು ಈಗ ನರಕ ಅನುಭವಿಸುವಂತಾಗಿದೆ.  
ಹೋದಲ್ಲೆಲ್ಲಾ ದುರ್ವಾಸನೆ: ಪಟ್ಟಣ ಪುರಸಭೆ ವ್ಯಾಪ್ತಿಯ ಈ ರಾಜಾಕಾಲುವೆಯು ಪಟ್ಟಣದ ಜೇನುಕಲ್ ಕ್ರೀಡಾಂಗಣದ ಪ್ರದೇಶದಿಂದ ಆರಂಭಗೊಂಡು ಹಾಸನ ರಸ್ತೆಯ ಬಲಭಾಗ ಮತ್ತು ಎಡಭಾಗಗಳ ಮೂಲಕ ಹಾದುಬಂದು ಶ್ರೀಗುರುಸಿದ್ದೇಶ್ವರ ಸಮುದಾಯ ಭವನದ ಹಿಂಭಾಗದಲ್ಲಿನ ರೈಲ್ವೆಕ್ರಾಸಿನ ಸೇತುವೆ ಕೆಳಭಾಗದಲ್ಲಿ ಹರಿದು ನಾಗತೀಹಳ್ಳಿ ಕೆರೆಯನ್ನು ಸೇರುವ ಈ ರಾಜಾಕಾಲುವೆ ಸುಮಾರು ಆರೇಳು ಕಿಮೀ ಉದ್ದವಿದೆ. ಪಟ್ಟಣದ ಹಿಂದುಳಿದ ಜನರು ವಾಸಿಸುವ ಬಡಾವಣೆಗಳ ಮೂಲಕ ಸಾಗುವ ಇದು ತಾನು ಹೋದಕಡೆಯೆಲ್ಲಾ ದುರ್ವಾಸನೆ ಚೆಲ್ಲುತ್ತಾ ಸಾಗಿದೆ.
ಆದರೆ, ದುರಂತ ಸಂಗತಿ ಎಂದರೆ ಈ ರಾಜಾಕಾಲುವೆ ಅನೇಕ ವರ್ಷಗಳಿಂದ ಸರಿಯಾಗಿ ನಿರ್ವಹಣೆ ಇಲ್ಲದ ಪರಿಣಾಮ ಹಾಳು ಬಿದ್ದು ಅಲ್ಲಲ್ಲಿ ಗುಂಡಿಗಳು ನಿರ್ಮಾಣಗೊಂಡಿವೆ. ಇತ್ತೀಚೆಗೆ ಬಿದ್ದ ಅಲ್ಪಸ್ವಲ್ಪ ಮಳೆ ನೀರು ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿನ ದೊಡ್ಡ ಚರಂಡಿಗಳ ಮೂಲಕ ರಾಜಾಕಾಲುವೆ ಹರಿದು ಬಂದು ಕಲುಷಿತ ನೀರಿನಲ್ಲಿ ಬೆರೆತಿದೆ.
ಈ ಬಗ್ಗೆ ಪುರಸಭಾ ನೈರ್ಮಲ್ಯ ವಿಭಾಗ ಯಾವುದೇ ಕ್ರಮವನ್ನು ಇದುವರೆಗೆ ತೆಗದುಕೊಳ್ಳದಿರುವುದು ಆಶ್ಚರ್ಯಕರ.



-ಪಿ. ಶಾಂತಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement