ಸೊಳ್ಳೆಗಳ ನಿಯಂತ್ರಣಕ್ಕೆ ಗಮನಹರಿಸಿ
ಕನ್ನಡಪ್ರಭ ವಾರ್ತೆ , ಹಾಸನ , ಏ. 22
ರೋಗಗಳ ನಿಯಂತ್ರಣ ಆರೋಗ್ಯ ಇಲಾಖೆ ಅಥವಾ ಇತರ ಇಲಾಖೆಗಳ ಜವಾಬ್ದಾರಿ ಮಾತ್ರವಲ್ಲ. ಪ್ರತಿಯೊಬ್ಬರೂ ಸಹ ತಮ್ಮ ಹಾಗೂ ನೆರೆಹೊರೆಯವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ವಿಶ್ವ ಆರೋಗ್ಯ ದಿನಾಚರಣೆ-2014 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ಸ್ವಚ್ಛತಾ ಹಾಗೂ ವೈಯಕ್ತಿಕ ಸ್ವಚ್ಛತೆಯಿಂದ ಅನೇಕ ರೋಗಗಳ ನಿಯಂತ್ರಣ ಮಾಡಬಹುದಾಗಿದೆ ಎಂದರು.
ಸೊಳ್ಳೆಗಳ ನಿಯಂತ್ರಣದ ಬಗ್ಗೆ ಪ್ರತಿಯೊಬ್ಬರೂ ಹೆಚ್ಚಿನ ಮುತುವರ್ಜಿ ವಹಿಸಬೇಕು. ವಾಸಿಸುವ ಮನೆ ಮತ್ತು ಪರಿಸರಗಳಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿಗೆ ಇರುವ ಅವಕಾಶಗಳನ್ನು ನಾಶಪಡಿಸಬೇಕು. ಆ ಮೂಲಕ ಮಲೇರಿಯಾ ಡೆಂಗ್ಯೂ ಚಿಕೂನ್ ಗುನ್ಯಾ ಮತ್ತಿತರ ರೋಗಗಳನ್ನು ತಡೆಗಟ್ಟಬೇಕು ಎಂದರು.
ಮನವರಿಕೆ ಮಾಡಬೇಕು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೊಳ್ಳೆ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ನಗರ ಪಟ್ಟಣ ಪ್ರದೇಶಗಳಲ್ಲಿ ಆಯಾಯ ಸ್ಥಳೀಯ ಸಂಸ್ಥೆಗಳು ಸೊಳ್ಳೆಗಳ ನಿಯಂತ್ರಣಕ್ಕೆ ನಾನಾ ಕ್ರಮಗಳನ್ನು ಅನುಸರಿಸುತ್ತಿದ್ದು, ಇನ್ನಷ್ಟು ಪರಿಣಾಮಕಾರಿಯಾಗಿ ಇದನ್ನು ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯ್ತಿ ಮೂಲಕ ಸೊಳ್ಳೆ ನಿಯಂತ್ರಣದ ಬಗ್ಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಮನೆ ಮನೆಗೆ ತೆರಳುವ ತಂಡಗಳು ಅವರವರ ಕುಟುಂಬದ ಆರೋಗ್ಯ ರಕ್ಷಣೆಗಾದರೂ ಸೊಳ್ಳೆಗಳ ನಿಯಂತ್ರಣ ಕ್ರಮಗಳಿಗೆ ಮುಂದಾಗಬೇಕು ಎಂಬುದನ್ನು ಮನವರಿಕೆ ಮಾಡಿಕೊಡಬೇಕು ಎಂದು ಉಪೇಂದ್ರ ಪ್ರತಾಪ್ ಸಿಂಗ್ ಹೇಳಿದರು.
,ಸಹಕಾರ ಅಗತ್ಯ: ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಎನ್.ಎನ್. ರಾಜ್ಗೋಪಾಲ್ ಮಾತನಾಡಿ, ವಿಶ್ವ ಆರೋಗ್ಯ ದಿನಾಚರಣೆ ಉದ್ದೇಶಗಳು, ಸಣ್ಣ ಕೀಟದಿಂದಾಗುವ ಸಮಸ್ಯೆಗಳ ಬಗ್ಗೆ ವಿವರ ನೀಡಿದ ಅವರು, ಯಾವುದೇ ರೋಗ ಅಥವಾ ಸಮಸ್ಯಾತ್ಮಕ ಕೀಟಗಳ ನಿಯಂತ್ರಣಕ್ಕೆ ಸಮುದಾಯದ ಪಾಲ್ಗೊಳ್ಳುವಿಕೆ ಸಹಕಾರವೂ ಅಗತ್ಯ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಜಿಲ್ಲಾ ಕೀಟ ಶಾಸ್ತ್ರಜ್ಞಾರಾದ ರಾಜೇಶ್ ಕುಲಕರ್ಣಿ ಹಾಗೂ ಡಾ.ಬಿ.ಕೆ. ವಿಜಯೇಂದ್ರ ಅವರು ಸೊಳ್ಳೆಗಳ ನಿಯಂತ್ರಣ ಕ್ರಮಗಳ ಬಗ್ಗೆ ಪ್ರಾತ್ಯಕ್ಷತೆ ಮೂಲಕ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಡಾ.ಬಿ.ಕೆ. ವಿಜಯೇಂದ್ರ, ಡಾ.ಎಂ.ಸಿ. ಹೇಮಲತಾ, ಡಾ.ಎಚ್.ಎಲ್. ಜನಾರ್ಧನ್, ಡಾ.ಜಿ. ಕೇಶವರಾಜು, ಸಾಬೀರ್ ಅಹಮದ್, ಡಾ.ಎಂ.ಎಸ್. ಮಹೇಶ್ ಹಾಗೂ ಇತರರು ಇದ್ದರು.
ವೈದ್ಯರ ಸಲಹೆ
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಎಲ್. ಶ್ಯಾಮಲಾದೇವಿ ಮಾತನಾಡಿ, ಯಾವುದೇ ರೋಗ ಬರುವುದಕ್ಕಿಂತ ಮುಂಚೆ ಮುಂಜಾಗ್ರತೆ ವಹಿಸಬೇಕು ಪ್ರತಿ ಮನೆಯ ನೀರು ಶೇಖರಣಾ ತೊಟ್ಟಿಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು. ಮನೆಯೊಳಗಿನ ಸೊಳ್ಳೆಯಿಂದ ಡೆಂಗ್ಯೂ ಹರಡುತ್ತದೆ ಹಾಗಾಗಿ ಮೆನೆಯೊಳಗೂ ಶೇಖರಿಸಿಟ್ಟಿರುವ ನೀರನ್ನು ಮುಚ್ಚಿಡಬೇಕು ಎಂದರು.