ಆದರ್ಶ ಅಳವಡಿಸಿಕೊಂಡಾಗ ಅಂಬೇಡ್ಕರ್ ಸೇವೆ ಸಾರ್ಥಕ
ಅರಸೀಕೆರೆ: ಇಂದಿನ ಯುವ ಜನತೆ ಅಂಬೇಡ್ಕರ್ ತತ್ವ ಸಿದ್ಧಾಂತ, ಮೌಲ್ಯಾದರ್ಶಗಳನ್ನು ಅಳವಡಿಸಿಕೊಂಡಾಗ ಮಾತ್ರ ಮಹನಿಯರ ಸೇವೆ ಸಾರ್ಥಕವಾಗಲಿದೆ ಎಂದು ಜಾವಗಲ್ ಗ್ರಾಮಾಂತರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಿ.ಪಿ. ನವೀನ್ ಅಭಿಪ್ರಾಯಪಟ್ಟರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಕಲಾ ಮತ್ತು ಸಾಂಸ್ಕೃತಿಕ ಯುವಕ ಸಂಘದ ವತಿಯಿಂದ ಅರಕೆರೆ ಗ್ರಾಮದಲ್ಲಿ ಮೊದಲನೇ ವರ್ಷದ ಅಂಬೇಡ್ಕರ್ ಜಯಂತ್ಯುತ್ಸವದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿನ ಮೇಲು ಕೀಳುಗಳನ್ನು ಹೋಗಲಾಡಿಸಿ ಸಮಾಜದ ಮುಖ್ಯ ವಾಹಿನಿಗೆ ತರಲು ಡಾ. ಅಂಬೇಡ್ಕರ್‌ರವರಂಥ ಮಹನೀಯರ ಜಯಂತ್ಯುತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಗ್ರಾಮದ ಮುಖಂಡ ಪಟೇಲ್ ಜಯಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಮಾಜಿ ಅಧ್ಯಕ್ಷ ಗುರುಸಿದ್ದಪ್ಪ, ದಯಾನಂದಮೂರ್ತಿ, ಹನುಮಯ್ಯ, ಬಾವಿಮನೆ ಕರಿಯಪ್ಪ, ರಂಗಯ್ಯ, ಸಿದ್ದಪ್ಪ ಇನ್ನಿತರ ಪ್ರಮುಖರು ಇದ್ದರು.
ಸಂಘದ ಅಧ್ಯಕ್ಷ ಕಿರಣ್ ಕುಮಾರ್, ಕಾರ್ಯದರ್ಶಿ ಮಧುಸೂಧನ್, ಉಪಾಧ್ಯಕ್ಷ ಲೋಕೇಶ, ಖಜಾಂಚಿ ಪ್ರದೀಪ್ ಕುಮಾರ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.