ಆಯುಕ್ತರ ಕಚೇರಿ ಮುಂದೆ ಕಸ ಸುರಿದು ಆಕ್ರೋಶ
ಹಾಸನ: ರಸ್ತೆ ಬದಿಯಲ್ಲೇ ಕಸವನ್ನು ಸುರಿಯಲಾಗುತ್ತಿದ್ದ ನಗರಸಭೆಯ ವಾಹನವನ್ನು ತಡೆದ ಸಾರ್ವಜನಿಕರು ನಗರಸಭೆ ಆಯುಕ್ತರ ಕಚೇರಿ ಮುಂದೆ ತಂದು ಸುರಿದ ಘಟನೆ ಬುಧವಾರ ನಡೆಯಿತು.
ನಗರಸಭೆಯಿಂದ ಅಪೆ ವಾಹನದಲ್ಲಿ ಸಂಗ್ರಹಿಸಿದ ಕಸವನ್ನು ನಗರದ ಗೊರೂರು ರಸ್ತೆ ಬಳಿ ಎಸೆಯಲಾಗುವುದರ ಬಗ್ಗೆ ಸಿಟ್ಟಿಗೆದ್ದ ನಾಗರಿಕರು ವಾಹನ ತಡೆದು ಆಯುಕ್ತರ ಕಚೇರಿ ಮುಂದೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು. ನಗರದ 7ನೇ ವಾರ್ಡ್ಗೆ ಸೇರಿದ ಕಸ ಸಂಗ್ರಹಿಸುವ ಅಫೆ ವಾಹನದಲ್ಲಿದ್ದ ಕಸವನ್ನು ಆಯುಕ್ತರ ಕಚೇರಿ ಮುಂದೆ ಸುರಿಯಲಾಯಿತು. ಈಗಾಗಲೇ ಕಸ ವಿಲೇವಾರಿಗೆ ನಿಗದಿ ಪಡಿಸಲಾಗಿರುವ ಸ್ಥಳಕ್ಕೆ ಕಸ ಸುರಿಯಲು ಅವಕಾಶ ಕಲ್ಪಿಸಬೇಕು. ಪ್ರಸ್ತುತ ಗೊರೂರು ರಸ್ತೆ ಬದಿಯಲ್ಲಿ ಕಸವನ್ನು ಸುರಿಯಲಾಗುತ್ತಿದೆ ಹಾಗೂ ಕಸಕ್ಕೆ ಬೆಂಕಿ ಹಾಕಿ ಸುಡಲಾಗುತ್ತಿರುವುದರಿಂದ ಈ ಸ್ಥಳದಲ್ಲಿ ವಾಸ ಮಾಡುವವರು ಮತ್ತು ಓಡಾಡುವರು ನರಕಯಾತನೆ ಅನುಭವಿಸುತ್ತಿದ್ದಾರೆ. ಆದ್ದರಿಂದ ರಸ್ತೆ ಬದಿಯಲ್ಲಿ ಸುರಿಯದಂತೆ ಆಗ್ರಹಿಸಿ ಆಯುಕ್ತರ ಕಚೇರಿಯ ಮುಂದೆ ಸುರಿದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಆಯುಕ್ತರ ಭರವಸೆ: ಸ್ಥಳಕ್ಕಾಗಮಿಸಿದ ಆಯುಕ್ತರು ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ನಂತರ ಟ್ರ್ಯಾಕ್ಟರ್ ಮೂಲಕ ಆಯುಕ್ತರ ಕಚೇರಿ ಮುಂದೆ ಸುರಿಯಲಾಗಿದ್ದ ಕಸವನ್ನು ತೆರವುಗೊಳಿಸಲಾಯಿತು.