'ಕೆರೆಗೆ ಹಾರ'ವಾದ ರಸ್ತೆ!
ಅರಸೀಕೆರೆ: ಅರಸೀಕೆರೆ ಪಟ್ಟಣದಿಂದ ಅಂಚೆಕೊಪ್ಪಲು ಮಾರ್ಗವಾಗಿ ಜಾವಗಲ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಅವ್ಯವಸ್ಥೆಯಿಂದಾಗಿ ಪ್ರಯಾಣಿಕರು, ವಾಹನ ಸವಾರರು ಸಂಕಷ್ಟ ಎದುರಿಸಬೇಕಾಗಿದೆ ಎಂದು ಈ ಭಾಗದಲ್ಲಿ ಸಂಚರಿಸುವ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಅಂಚೆಕೊಪ್ಪಲು ಕೆರೆ ಅಭಿವೃದ್ಧಿಗೆ ಲಕ್ಷಾಂತರ ರು.ಗಳ ಅನುದಾನ ಬಿಡುಗಡೆಯಾಗಿದೆ. ಆದರೆ, ಕೆರೆಯಿಂದ ಎತ್ತಿದ ಹೂಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ಗೋಜಿಗೆ ಹೋಗದ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಅದನ್ನು ತಂದು ರಸ್ತೆಯ ಬದಿಗೆ ಸುರಿದಿದ್ದಾರೆ.
ಅಲ್ಲದೇ, ಕೆರೆಗೆ ಸಂಪರ್ಕ ಕಲ್ಪಿಸುವ ಕೊಳವೆಗಳನ್ನು ಸಮರ್ಪಕವಾಗಿ ಅಳವಡಿಸದೇ ಇರುವುದರಿಂದ ಮಳೆಯ ನೀರು ಸಂಪೂರ್ಣ ರಸ್ತೆಯಲ್ಲಿಯೇ ನಿಲ್ಲುವಂತಾಗಿದೆ. ಇದರಿಂದಾಗಿ, ಪಾದಚಾರಿಗಳು, ವಾಹನ ಸವಾರರು ತೀವ್ರ ತೊಂದರೆ ಎದುರಿಸುವಂತಾಗಿದೆ. ಆದರೆ ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸದೆ ಗಾಢನಿದ್ರೆಗೆ ಜಾರಿದ್ದಾರೆ ಎಂದು ಕಿಡಿಕಾರ ತೊಡಗಿದ್ದಾರೆ.
ಸ್ಥಳೀಯ ಜಾಜೂರು ಗ್ರಾಮ ಪಂಚಾಯ್ತಿ ಕೂಡಲೇ ಅವ್ಯವಸ್ಥೆ ಸರಿಪಡಿಸದಿದ್ದರೆ ಗ್ರಾಮ ಪಂಚಾಯ್ತಿ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.