ದುರಸ್ತಿ ಗುಣಮಟ್ಟದ್ದಾಗಿರಲಿ
ಕ.ಪ್ರ. ವಾರ್ತೆ ಟಿ ಬೇಲೂರು ಟಿ ಏ. 23
ಪಟ್ಟಣದ ವಿಷ್ಣು ಸಮುದ್ರ ಕೆರೆಯ ಪಕ್ಕದಲ್ಲಿರುವ ಕಲ್ಯಾಣಿಯ ದುರಸ್ತಿಗೆ ಪ್ರಸ್ತುತ ರು. 1.10 ಕೋಟಿ ಬಿಡುಗಡೆ ಮಾಡಿದ್ದು, ಉತ್ತಮ ಸ್ಥಿತಿಯಲ್ಲಿ ಜೀಣೋದ್ಧಾರ ಕಾಮಗಾರಿ ನಡೆಸುವಂತೆ ಸಣ್ಣ ನೀರಾವರಿ ಅಧಿಕಾರಿಗಳಿಗೆ ಶಾಸಕ ವೈ.ಎನ್. ರುದ್ರೇಶಗೌಡ ತಾಕೀತು ಮಾಡಿದರು.
ತಾಲ್ಲೂಕಿನ ಕಲ್ಯಾಣಿಯ ಬಳಿ ಭೇಟಿ ನೀಡಿದ ಅವರು, ಕೆಲಸ ಯೋಜನಾ ನಕ್ಷೆಯಂತೆ ನಡೆಯಬೇಕು. ಇದರಲ್ಲಿ ಯಾವುದೇ ರೀತಿಯ ಅಕ್ರಮಗಳಿಗೆ ಅವಕಾಶ ನೀಡಬಾರದು. ಹೊರಗಡೆಯಿಂದ ಒಳಚರಂಡಿ ಇನ್ನಿತರ ಗಲೀಜು ನೀರು ಬಾರದಂತೆ ಎಚ್ಚರ ವಹಿಸಬೇಕು. ಕಲ್ಯಾಣಿಯಲ್ಲಿ ಸಾವಿರಾರು ಭಕ್ತರು ಸ್ನಾನ ಮಾಡುವುದರಿಂದ ಲೋಪ ಆಗದಂತೆ ಎಚ್ಚರ ವಹಿಸಬೇಕೆಂದು ಸೂಚಿಸಿದರು.
ಸಚಿವರ ಜೊತೆ ಚರ್ಚೆ: ಇದರ ಪಕ್ಕದ ವಿಷ್ಣುಸಮುದ್ರ ಕೆರೆ ಹೂಳು ತೆಗೆಯಲು ಪ್ರತಿವರ್ಷ ರು. 2 ಕೋಟಿಗಳನ್ನು ಸರ್ಕಾರ ನೀಡಲಿದೆ. ಆದರೆ ಪ್ರತಿವರ್ಷ ಹೂಳು ತೆಗೆಯುವುದು ಸಾಧ್ಯವಿಲ್ಲ. ಒಟ್ಟಿಗೆ ರು. 10 ಕೋಟಿ ನೀಡಿದರೆ ಒಂದು ಬಾರಿ ಹೂಳು ಸಂಪೂರ್ಣವಾಗಿ ತೆಗೆಯಬಹುದು. ಕೆರೆ ಅಚ್ಚುಕಟ್ಟುದಾರರಿಗೆ ಇದು ಅನುಕೂಲವಾಗಲಿದೆ. ಈ ಬಗ್ಗೆ ಸಂಬಂಧಪಟ್ಟ ಸಚಿವರಲ್ಲಿ ಚರ್ಚಿಸುವುದಾಗಿ ತಿಳಿಸಿದರು.
ಸಲಹೆ: ಕೆರೆಯಲ್ಲಿ ಈಗಲೇ ಹೂಳು ತೆಗೆದರೆ ಮಳೆಗಾಲ ಹತ್ತಿರ ಇರುವುದರಿಂದ ಬಿಟ್ರುವಳ್ಳಿ, ಕೊಪ್ಪಲು, ಮಲ್ಲಾಪುರ ಇವುಗಳಿಗೆ ಸೇರಿದ 9 ಕೆರೆಗಳಿಗೆ ನೀರಿಲ್ಲದೆ ರೈತರಿಗೆ ತೊಂದರೆ ಆಗಲಿದೆ. ಆದ್ದರಿಂದ ಮುಂದಿನ ಮಳೆಗಾಲಕ್ಕೆ ಮುಂಚೆ ಹೂಳು ತೆಗೆಯುವಂತೆ ಸಲಹೆ ನೀಡಿದರು.
ಎಲ್ಲದಕ್ಕೂ ವ್ಯವಸ್ಥೆ: ಎಂಜಿನಿಯರ್ ನಾಗರಾಜ್ ಮಾತನಾಡಿ, ಕಲ್ಯಾಣಿಯ ಜೀರ್ಣೋದ್ಧಾರ ಕೆಲಸ 3 ತಿಂಗಳೊಳಗೆ ಪೂರ್ಣಗೊಳಿಸಲಾಗುವುದು. ಕಲ್ಯಾಣಿಯ ಸುತ್ತ ಕಸ ಬರದಂತೆ ಕಬ್ಬಿಣದ ಬೇಲಿ ಅಳವಡಿಸಲಾಗುವುದು. ಕಲ್ಯಾಣಿ ಒಳ ಬರಲು ಗೇಟ್, ಮೆಟ್ಟಿಲು, ಕಲ್ಯಾಣಿ ನಾಲ್ಕು ಕಡೆ ಮೆಟ್ಟಿಲು ಅಳವಡಿಸಲಾಗುವುದು. ಕಲ್ಯಾಣಿಯ ಸಮೀಪದಲ್ಲೇ ಸ್ನಾನ ಮತ್ತು ಬಟ್ಟೆ ತೊಳೆಯಲು ವ್ಯವಸ್ಥೆ ಮಾಡಲಾಗುವುದು ಎಂದರು.
ಮೂಲಸೌಕರ್ಯ: ಕಲ್ಯಾಣಿ 35 ಮೀಟರ್ ಅಗಲ, 55 ಮೀಟರ್ ಉದ್ದ ಆಳ 3 ಮೀಟರ್ ಅಳತೆಯಲ್ಲಿದ್ದು, ಕಲ್ಯಾಣಿಗೆ ಹೊಸ ನೀರು ಬರಲು ಹಳೇ ನೀರು ಹೊರ ಹೋಗಲು ವ್ಯವಸ್ಥೆ ಮಾಡಲಾಗುವುದು. ಕಲ್ಯಾಣಿ ಪಕ್ಕದಲ್ಲೇ ಹಾದುಹೋಗಿರುವ ಪುರಸಭೆಯ ಪೈಪ್‌ಲೈನ್ ನೀರನ್ನು ಪಡೆಯಲಾಗುವುದು ಮತ್ತು ಚರಂಡಿ ನೀರು ಒಳ ಬರದಂತೆ ಕ್ರಮ ಕೈಗೊಳ್ಳಲಾಗುವುದು. ಮಂಟಪಕ್ಕೆ ವಿದ್ಯುತ್ ದೀಪ ಅಳವಡಿಸಲಾಗುವುದು. ಕಲ್ಯಾಣಿ ಸುತ್ತಲೂ ವಿದ್ಯುತ್ ದೀಪ ಅಳವಡಿಸಲಾಗುವುದು. ಉತ್ಸವ ಸಂದರ್ಭ ಕಲ್ಯಾಣಿ ಸುತ್ತ ಭಕ್ತರು ಕೂರಲು ಮೆಟ್ಟಿಲುಗಳನ್ನು ನಿರ್ಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಿಪಿಐ ಗಣೇಶ್, ಪುರಸಭೆ ಅಧ್ಯಕ್ಷ ಬಿ. ಗಿರೀಶ್, ಸದಸ್ಯ ವಿ. ಅಣ್ಣೇಗೌಡ, ಪಿ.ಎಂ. ದೇವರಾಜ್, ವೆಂಕಟೇಗೌಡ, ಕೇಶವಮೂರ್ತಿ, ರಮೇಶ್, ಇಲಾಖೆ ನೌಕರ ಶ್ರೀನಿವಾಸ್ ಇದ್ದರು.