ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮನುಷ್ಯರ ಮೇಲೆ ದಯ ಇಲ್ಲವೇ?

Mainashree
Updated On : 23 Apr 2014, 9:47 am

ಕನ್ನಡಪ್ರಭ ವಾರ್ತೆ, ಹಾಸನ, ಏ. 23
ಮನುಷ್ಯರಿಗಿಲ್ಲದ ಪ್ರೀತಿ ಬಿಡಾಡಿ ನಾಯಿಗಳ ಮೇಲೇಕೆ ಸ್ವಾಮಿ ? ಇದು ಹಲವಾರು ಸಂಘಟನೆಗಳ ಪ್ರತಿನಿಧಿಗಳು ಜಿಲ್ಲಾಡಳಿತವನ್ನು ಕೇಳುತ್ತಿರುವ ಪ್ರಶ್ನೆ. ಹಾಗೆ ಅವರು ಕೇಳಲು ಸಕಾರಣವೂ ಇದೆ.
ಹೆಚ್ಚಾಗಿರುವ ಬೀದಿ ನಾಯಿಗಳ ಹಾವಳಿಯಿಂದ ಜನರು ಪ್ರಾಣ ಕೈಯ್ಯಲ್ಲಿ ಹಿಡಿದುಕೊಂಡು ನಡೆದಾಡುವ ಪರಿಸ್ಥಿತಿ ಬಂದೊದಗಿದೆ. ಇದನ್ನು ಮನಗಂಡು ಬೀದಿನಾಯಿಗಳ ಕಾಡಾಡಕ್ಕೆ ಅಂತ್ಯ ಕಾಣಿಸಲು ಜಿಲ್ಲಾಡಳಿತ ಮುಂದಾಗಿದೆ. ಏತನ್ಮಧ್ಯೆ, ಬೀದಿನಾಯಿಗಳನ್ನು ಪಟ್ಟಣದಿಂದ ದೂರ ಕೊಂಡೊಯ್ದು ಸಾಕಲು ಮುಂದೆ ಬಂದಿರುವ ಪ್ರಾಣಿ ದಯಾ ಸಂಘ, ಈ 'ಶ್ವಾನ ಮಂದಿರ' ನಿರ್ಮಾಣಕ್ಕಾಗಿ 8 ಎಕರೆ ಜಾಗ ಬೇಕೆಂದು ಜಿಲ್ಲಾಡಳಿತದ ಮುಂದೆ ಪ್ರಸ್ತಾವನೆಯನ್ನಿಟ್ಟಿದೆ. ಜಿಲ್ಲಾಡಳಿತವೂ ಇದಕ್ಕೆ ಹೆಚ್ಚೂಕಡಿಮೆ ತಲೆಯಲ್ಲಾಡಿಸಿದೆ.
ಜಿಲ್ಲಾಡಳಿತದ ಈ ನಿರ್ಧಾರ ಹಲವಾರು ಸಂಘಟನೆಗಳನ್ನು ಕೆರಳಿಸಿದೆ. ಹಾಗಾಗಿಯೇ, ಅವು ಬಹಿರಂಗವಾಗಿ ಜಿಲ್ಲಾಡಳಿತದ ನಿರ್ಧಾರದ ವಿರುದ್ಧ ದನಿಯೆತ್ತಿವೆ. ಅಲ್ಲದೇ, ಪ್ರಾಣಿ ಸಂಘಕ್ಕೆ 'ದಯಾ' ತೋರಿದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿವೆ.
ಒತ್ತಾಯ: ಈ ಬಗ್ಗೆ ಪ್ರತಿಕ್ರಯಿಸಿರುವ ದಲಿತ ಸಾಹಿತ್ಯ ಪರಿಷತ್, ಸಮತಾ ಸೈನಿಕ ದಳ ಹಾಗೂ ಇನ್ನಿತರೆ ಸಂಘಟನೆಗಳು, ಜಿಲ್ಲಾಡಳಿತ ಬೀದಿ ನಾಯಿ ಸಾಕಲು ಯಾವುದೇ ಕಾರಣಕ್ಕೆ ಭೂಮಿ ಕೊಡಬಾರದು. ಸಂತಾನಹರಣ ಶಸ್ತ್ರಚಿಕಿತ್ಸೆ ಅಥವಾ ಇನ್ಯಾವುದೇ ರೀತಿಯ ಕ್ರಮಗಳ ಮೂಲಕ ಬೀದಿ ನಾಯಿಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿವೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಶಂಗಟನೆಗಳ ಪ್ರತಿನಿಧಿಗಳು, ನಗರದಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗಿ, ಮಕ್ಕಳ ಪಾಲಿಗೆ ಅಪಾಯದ ಸನ್ನಿವೇಶ ತಂದೊಡ್ಡಿದ್ದರೂ,  ಪ್ರಾಣಿ ದಯಾ ಸಂಘದವರಿಗೆ ಮನುಷ್ಯರಿಗಿಂತ ಪ್ರಾಣಿಗಳ ಬಗ್ಗೆ ಪ್ರೀತಿ ಹೆಚ್ಚಾಗಿರುವುದು  ದುರಂತ ಎಂದು ಸಂಘಟನೆಗಳು ವಿಷಾದ ವ್ಯಕ್ತಪಡಿಸಿವೆ.
ವ್ಯಾಪಕ ಟೀಕೆ: ಪ್ರಾಣಿ ದಯಾ ಸಂಘದವರಿಗೆ ಭೂಮಿ ನೀಡುವ ಬದಲು ನಿವೇಶನಕ್ಕಾಗಿ ಕಾಯುತ್ತಿರುವ ಅದೆಷ್ಟೋ ಬಡವರಿಗೆ ಭೂಮಿ ನೀಡಲು ಜಿಲ್ಲಾಡಳಿತ ಚಿಂತನೆ ನಡೆಸಲಿ ಎಂದಿರುವ ಸಂಘಟನೆಗಳು ಕಳೆದ 20 ವರ್ಷದಿಂದ ಪೌರ ಕಾರ್ಮಿಕರು ನಿವೇಶನಕ್ಕೆ ಅರ್ಜಿ ಹಾಕಿಕೊಂಡು ಕಾಯುತ್ತಿದ್ದಾರೆ. ಕನಿಷ್ಟ 2 ಎಕರೆ ಭೂಮಿ ಇವರಿಗೆ ಒದಗಿಸಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ ಎಂದು ಅವು ಟೀಕಿಸಿವೆ.

ಅನುಕಂಪವಿಲ್ಲ
ಗಂಗೂರು ಜೀತ ವಿಮುಕ್ತರ ಪೈಕಿ ಉಳಿದ 25 ಜನಕ್ಕೆ ಭೂಮಿ ನೀಡಿಲ್ಲ. ಅವರದ್ದು 20 ವರ್ಷಗಳ ಹೋರಾಟ. ಜಿಲ್ಲೆಯಲ್ಲಿ ಭೂಮಿಗಾಗಿ ಅರ್ಜಿ ಹಾಕಿಕೊಂಡು ಸಾವಿರಾರು ದಲಿತರ, ಶೋಷಿತರ, ಬಡವರ, ಪೌರ ಕಾರ್ಮಿಕರ, ಅಲ್ಪ ಸಂಖ್ಯಾತರ ಅರ್ಜಿಗಳು ಬಿದ್ದಿವೆ. ದಿನ ಬೆಳಗಾದರೆ ಜಿಲ್ಲಾಧಿಕಾರಿ ಕಚೇರಿಗೆ ಸುತ್ತುತ್ತಿದ್ದಾರೆ. ಮನುಷ್ಯರ ಮೇಲೆ ಇಲ್ಲದ ಅನುಕಂಪವನ್ನು ಪ್ರಾಣಿಗಳ ಮೇಲೆ ತೋರಿಸುವ ಅಗತ್ಯ ಇಲ್ಲ ಎಂದರು.
ಪ್ರಾಣಿ ದಯಾ ಸಂಘದವರಿಗೆ ನಾಯಿಗಳ ಮೇಲೆ ಅಷ್ಟು ಪ್ರೀತಿ ಇದ್ದರೆ ಸಂಘದವರೇ ಸ್ವಂತ ಹಣ ಹಾಕಿಕೊಂಡು ಜಮೀನು ಖರೀದಿಸಿ ನಾಯಿಗಳನ್ನು ಕಟ್ಟಿಕೊಳ್ಳಲಿ, ಆರೈಕೆ ಮಾಡಿಕೊಳ್ಳಲಿ ಎಂದು  ದಸಾಪ ಜಿಲ್ಲಾಧ್ಯಕ್ಷ ಹೆತ್ತೂರು ನಾಗರಾಜ್, ಆರ್‌ಪಿಐ  ಜಿಲ್ಲಾಧ್ಯಕ್ಷ ಸತೀಶ್, ಅಂಬೇಡ್ಕರ್ ಯುವಕ ಸಂಘದ ನಿಟ್ಟೂರು ಸ್ವಾಮಿ, ದಂಡೋರ ಸೋಮು ಒತ್ತಾಯಿಸಿದ್ದಾರೆ.

ಮೇನಕಾ ಗಾಂಧಿ ವಿರುದ್ಧ ಕಿಡಿ
ಏತನ್ಮಧ್ಯೆ, ಬೀದಿ ನಾಯಿಗಳ ಸುರಕ್ಷತೆಗೆ ಸಂಬಂಧಿಸಿದಂತೆ ಆಂದೋಲನ ಸೃಷ್ಟಿಸಿದ್ದ ಮೇನಕಾ ಗಾಂಧಿ ವಿರುದ್ಧವೂ ಸಂಘಟನೆಗಳು ಕಿಡಿಕಾರಿವೆ. ಈ ಜಿಲ್ಲೆಗೆ ಸಂಬಂಧವಿಲ್ಲದ ಮೇನಕಾ ಗಾಂಧಿ ಹೇಳಿದರೆಂದು ಜಿಲ್ಲಾಡಳಿತ ಸರ್ಕಾರಿ ಜಾಗವನ್ನು ನಾಯಿಗಳ ಸಾಕಲು ದಯಾ ಸಂಘಕ್ಕೆ ನೀಡಿದರೆ ಅದರ ವಿರುದ್ಧ ದೊಡ್‌ಡ ಹೋರಾಟ ನಡೆಸಲಾಗುವುದು. ಮೇನಕಾ ಗಾಂಧಿ ದಲಿತರ, ಬಡವರ, ಶೋಷಿತರ, ಈ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಹೋರಾಡಿಲ್ಲ. ನಾಯಿಗಳಿಂದ ಕಡಿತಕ್ಕೊಳಗಾದವರಿಗೆ ಒಂದು ಸಾಂತ್ವನ ಹೇಳಿಲ್ಲ. ಅವರ ಮಾತಿಗೆ ಬೆಲೆ ಕೊಡುವ ಅಗತ್ಯ ಇಲ್ಲ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement