ರಸ್ತೆ ಅಗಲೀಕರಣ ಕಾರ್ಯಕ್ಕೆ ಚಾಲನೆ
ಹಾಸನ: ಒಂದೂವರೆ ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಪಟ್ಟಣದ ಮುಖ್ಯ ರಸ್ತೆ ಕಾಮಗಾರಿಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು ಒಂದೆರಡು ದಿನಗಳೊಳಗೆ ಕಾಮಗಾರಿಯನ್ನು ಪ್ರಾರಂಭಿಸಲಾಗುವುದೆಂದು ಪಟ್ಟಣ ಪಂಚಾಯ್ತಿ ಎಂಜಿನಿಯರ್ ಶ್ಯಾಮ್ ತಿಳಿಸಿದ್ದಾರೆ.
ಪಟ್ಟಣದಲ್ಲಿ ಮಂಗಳವಾರ ರಸ್ತೆ ಕಾಮಗಾರಿ ಪ್ರಯುಕ್ತ ಸರ್ವೇ ಕಾರ್ಯ ನಡೆಸುತ್ತಿದ್ದ ಸ್ಥಳಕ್ಕೆ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ನೀಲೂಫರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದರು. ಹಲವಾರು ತಿಂಗಳಿಂದ ತಾಂತ್ರಿಕ ತೊಂದರೆಗಳಿಂದಾಗಿ ಪ್ರಾರಂಭವಾಗದೇ ಉಳಿದಿದ್ದ ಕಾಮಗಾರಿಗೆ ಚಾಲನೆ ದೊರೆತಿದ್ದು ಮುಖ್ಯಮಂತ್ರಿಯವರ ನಗರೋತ್ಥಾನ ಭಾಗ -2 ಯೋಜನೆಯ ರು. 5 ಕೋಟಿ ಅನುದಾನದಲ್ಲಿ ಕಾಮಗಾರಿ ನಡೆಸಲಾಗುವುದು.
ಪಟ್ಟಣದ ಮುಖ್ಯ ರಸ್ತೆ ಸೇರಿದಂತೆ ಕೆ.ಇ.ಬಿ. ಸರ್ಕಲ್‌ನಿಂದ ಹುಣಸವಳ್ಳಿಯ ಪಂಪ್ ಹೌಸ್‌ವರೆಗೆ 1900 ಮೀ. ಉದ್ದ ಹಾಗೂ 4 ಮೀ. ಅಗಲದ ಕಾಂಕ್ರೀಟ್ ಹಾಗೂ ಡಾಂಬರ್ ರಸ್ತೆ ಹಳೇ ಆಲೂರು ಗ್ರಾಮದಿಂದ ರಂಗನಾಥ ಸ್ವಾಮಿ ದೇವಸ್ಥಾನದ ಮೂಲಕ ಬಿಕ್ಕೋಡನ್ನು ಸಂಪರ್ಕಿಸುವ ರಸ್ತೆಗಳ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ಪಟ್ಟಣದ ಈಗಿರುವ ಕಾಂಕ್ರೀಟ್ ರಸ್ತೆಯ ಮೇಲೆಯೇ ನೂತನ ತಾಂತ್ರಿಕತೆಯನ್ನು ಉಪಯೋಗಿಸಿ ಪಟ್ಟಣದ ಪೆಟ್ರೋಲ್ ಬಂಕ್‌ನಿಂದ ಮರಸು ಕೂಡಿಗೆವರೆಗೆ 15 ಮೀ.ಅಗಲ ಹಾಗೂ 1735 ಮೀಟರ್ ಉದ್ದದ ರಸ್ತೆಯನ್ನು ನಿರ್ಮಿಸಲಾಗುವುದು. ರಸ್ತೆಯ ಮಧ್ಯದಲ್ಲಿ ಡಿವೈಡರ್ ನಿರ್ಮಿಸಲಾಗುವುದು ಎಂದರು.
ಗುತ್ತಿಗೆಯನ್ನು ಬೆಂಗಳೂರು ಮೂಲದ ಬಿ.ಎಸ್.ಆರ್ ಕಂಪೆನಿ ಗುತ್ತಿಗೆ ಪಡೆದಿದ್ದು ಮುಖ್ಯ ರಸ್ತೆ 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಈಗಿರುವ ರಸ್ತೆಯ ಬದಿಗಳಿಂದ ಎರಡೂ ಕಡೆ 10 ಅಡಿ ಅಗಲದ ರಸ್ತೆ ಮಾಡುವ ನಿಟ್ಟಿನಲ್ಲಿ ಎರಡೂ ಬದಿಗಳಲ್ಲಿರುವ ಮರ ಹಾಗೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.