ನೀರಿಗಾಗಿ ಗ್ರಾಮಸ್ಥರ ಪ್ರತಿಭಟನೆ
ಸಕಲೇಶಪುರ: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟ ಜನಪ್ರತಿನಿಧಿಗಳು ವಿಫಲರಾಗಿದ್ದಾರೆಂದು ಆರೋಪಿಸಿ ಹೆಬ್ಬನಹಳ್ಳಿ ಗ್ರಾಮಸ್ಥರು ಗ್ರಾಮದಲ್ಲೇ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆಯಿತು.
ಗ್ರಾಮದ ಸುಮಾರು 150 ದಲಿತ ಕುಟುಂಬಗಳಿರುವಲ್ಲಿ ಕಳೆದ ಎರಡು ವರ್ಷದ ಹಿಂದೆ 9 ನೀರಿನ ಟ್ಯಾಂಕ್ ನಿರ್ಮಿಸಲಾಗಿತ್ತು. ಇದಲ್ಲದೇ, ತೆರೆದ ಬಾವಿ ಸಹ ನಿರ್ಮಿಸಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಲಾಗಿತ್ತಲ್ಲದೇ, ನೀರಿನ ಸಮಸ್ಯೆ ನೀಗಿಸಲು ಮನವಿ ಮಾಡಲಾಗಿತ್ತು. ಕಳೆದ ಎರಡು ತಿಂಗಳ ಹಿಂದೆ ತೆರೆದ ಬಾವಿಗೆ ಮೋಟರ್ ಆಳವಡಿಸಲಾಗಿದೆ. ಆದರೆ, ಪೈಪ್ ಆಳವಡಿಸದ ಕಾರಣ ಗ್ರಾಮಕ್ಕೆ ಕುಡಿಯುವ ನೀರು ದೊರೆಕದಾಗಿದೆ ಎಂಬುದು ಗ್ರಾಮಸ್ಥರ ಅಳಲು.
ಎಚ್ಚರಿಕೆ: ಇದಲ್ಲದೇ, ತೆರೆದ ಬಾವಿ ಸಂಪೂರ್ಣ ಕೆಸರಿನಿಂದ ಆವೃತ್ತವಾಗಿದ್ದು ಇದು ಕುಡಿಯುವ ನೀರು ಒದಗಿಸಲು ಉತ್ತಮವಾಗಿಲ್ಲ. ಆದ್ದರಿಂದ ಶೀಘ್ರವೇ ಹೊಸದಾಗಿ ತೆರೆದ ಬಾವಿ ನಿರ್ಮಿಸಿ ಪೈಪ್ ಆಳವಡಿಸುವ ಮೂಲಕ ಕುಡಿಯುವ ನೀರು ಒದಗಿಸಬೇಕು. ಇನ್ನೊಂದು ವಾರದಲ್ಲಿ ಈ ಬೇಡಿಕೆ ಈಡೇರಿಸದಿದ್ದರೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಪ್ರತಿಭಟನೆ ನೇತೃತ್ವವನ್ನು ಈ ಸಂದರ್ಭದಲ್ಲಿ ಭುವನಾಕ್ಷ, ದೇವಮ್ಮ, ರುದ್ರೇಶ್, ಲೋಕೇಶ್ ವಹಿಸಿದ್ದರು.