ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಾಹನದಲ್ಲೇ ಚಾಲಕ ಕೊಲೆ

Mainashree
Updated On : 25 Apr 2014, 12:03 pm

ಕ.ಪ್ರ.ವಾರ್ತೆ ಟಿ ಕುಣಿಗಲ್ ಟಿ ಏ. 24
ವಾಹನದಲ್ಲಿ ಚಾಲಕನನ್ನು ಕೊಲೆಮಾಡಿ, ಅದರಲ್ಲೆ ಬಿಟ್ಟು ಹೋಗಿರುವ ಘಟನೆ ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.
ಹಾಸನ ಜಿಲ್ಲೆಯ ಬೇಲೂರಿನ ಕಾಫಿ ಪ್ಲಾಂಟರ್ ಅಗಿರುವ ಕೆ.ಮಹಮದ್ ಷರೀಫ್ ಎಂಬಾತ, ತನ್ನ ಕುಟುಂಬ ಸಮೇತ, ಮಗನನ್ನು ವಿದ್ಯಾಭ್ಯಾಸಕ್ಕೆ ಲಂಡನ್‌ಗೆ ಕಳುಹಿಸಲು ಬುಧವಾರ ರಾತ್ರಿ ಬೆಂಗಳೂರಿಗೆ ಬೊಲೆರೊ ಜೀಪಿನಲ್ಲಿ ತೆರಳಿದ್ದರು. ಆದರೆ, ವಿಮಾನದ ವೇಳೆಗೆ ತಲುಪದ ಕಾರಣ, ವಿಧಿ ಇಲ್ಲದೆ, ಗುರುವಾರ ಬೆಳಗಿನ ಜಾವ ವಾಪಸ್ ಬೇಲೂರಿಗೆ ಆಗವಿಸುತ್ತಿದ್ದಾಗ, ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ರಸ್ತೆಯ ಚೊಟ್ನಹಳ್ಳಿ ಸೇತುವೆ ಬಳಿ ಜೀಪ್ ನಿಯಂತ್ರಣ ತಪ್ಪಿ ರಸ್ತೆಬದಿಯ ಸೇತುವೆಗೆ ಡಿಕ್ಕಿ ಹೊಡೆದು ಹದಿನೈದು ಅಡಿ ಕೆಳಗಿನ ಕಾಲುವೆಗೆ ಬಿತ್ತು. ಪರಿಣಾಮ ಕೆ.ಮಹಮದ್ ಷರೀಫ್ (53) ಸ್ಥಳದಲ್ಲೆ ಮೃತಪಟ್ಟರು. ಅವರ ಪತ್ನಿ ತಾಜುನ್ನಿಸಾ(48) ತಲೆಗೆ ತೀವ್ರ ಪೆಟ್ಟಾಗಿದ್ದು, ಜೀಪ್ ಚಾಲನೆ ಮಾಡುತ್ತಿದ್ದ ಮಗ ಸಿನಾನ್ ಅಹಮದ್(20)ಮಗಳಾದ ಸಹಲಶರೀನ್(18), ಇಪ್ಲಾಜುಬೇದಾ(23) ತೀವ್ರಗಾಯಗೊಂಡರು. ಗ್ರಾಮಸ್ಥರಿಂದ ವಿಷಯ ತಿಳಿದ ಪೊಲೀಸರು, ಗಾಯಾಳುಗಳನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಿಕೊಟ್ಟರು.
ಕತ್ತು ಹಿಸುಕಿ ಕೊಲೆ: ಕಾಲುವೆಗೆ ಬಿದಿದ್ದ ಜೀಪನ್ನು ಕ್ರೇನ್ ಮೂಲಕ ಎತ್ತಲು ಪೊಲೀಸರು ಮುಂದಾದಾಗ,  ಕಾಲುವೆ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಟೆಂಪೋ ಟ್ರಾವೆಲ್ಲರ್ ವಾಹನ ನಿಂತಿರುವುದನ್ನು ಗಮನಿಸಿದರು. ಕ್ರೇನ್ ಚಾಲನೆಗೆ ಅಡ್ಡಿಯಾಗಿದ್ದರಿಂದ, ವಾಹನವನ್ನು ಮುಂದಕ್ಕೆ ಹಾಕುವಂತೆ ಸೂಚನೆ ನೀಡಲು ಹೋದ ಕ್ರೇನ್ ಸಿಬ್ಬಂದಿಗೆ ವಾಹನದಿಂದ ಕೆಟ್ಟವಾಸನೆ ಬರುತ್ತಿದ್ದುದನ್ನು ಗಮನಿಸಿ, ಒಳಗೆ ನೋಡಿದಾಗ ಯುವಕನೊಬ್ಬನ ಶವ ಕಂಡು ಬಂತು.
ಅಲ್ಲೇ ಇದ್ದ ಪೊಲೀಸರು ಆಗಮಿಸಿ, ಟಿಟಿ ವಾಹನವನ್ನು ಪರಿಶೀಲಿಸಿದಾಗ, ವಾಹನದಲ್ಲಿ ಚಾಲನೆ ಪರವಾನಗಿ ಸೇರಿದಂತೆ ಇತರೆ ದಾಖಲೆಗಳು ಪತ್ತೆಯಾದವು. ಕೊಲೆಗೀಡಾದವನನ್ನು ಹಾಲಿ ಬೆಂಗಳೂರು ಮೂಡ್ಲಪಾಳ್ಯದಲ್ಲಿ ಟೆಂಪೋ ಟ್ರಾವೆಲ್ಲರ್ ವಾಹನ ಇಟ್ಟುಕೊಂಡು ಚಾಲಕ ಕಂ ಮಾಲೀಕನಾಗಿದ್ದ, ಮೂಲತಃ ಚನ್ನರಾಯಪಟ್ಟಣ ತಾಲೂಕಿನ ಮುದ್ಲಾಪುರ ಗ್ರಾಮದ ನಿಂಗಪ್ಪನವರ ಮಗ ಎಂ.ಎನ್.ಹರೀಶ್(28)ಎಂದು ಗುರುತಿಸಲಾಗಿದೆ. ಈತನ ಮದವೆ, ಮೇ 11-12 ಕ್ಕೆ ನಿಗದಿಯಾಗಿತ್ತು ಎಂದು ತಿಳಿದುಬಂದಿದೆ.
ವಾಹನದಲ್ಲಿ ಲಗ್ನಪತ್ರಿಕೆಗಳು ಹರಡಿದ್ದು, ಕೊಲೆಯಾದವನ ಕತ್ತನ್ನು ಬಿಗಿದಿರುವ ಕುರುಹುಗಳು ಕಂಡುಬಂದಿದೆ. ಮೃತದೇಹದ ಸುತ್ತ ಬಳೆಚೂರುಗಳು, ಮಹಿಳೆಯ ಒಳಉಡುಪು, ಮೃತದೇಹದ ಮೇಲೆ ಕೀಟನಾಶಕವನ್ನು ಸಿಂಪಡಿಸಲಾಗಿರುವುದು ಪತ್ತೆಯಾಗಿದೆ. ಸ್ಥಳಕ್ಕಾಗಮಿಸಿದ ತಂದೆ ನಿಂಗಪ್ಪ ಮತ್ತು ಮೃತನ ಸಂಬಂಧಿಕರ ರೋದನ ಮುಗಿಲು ಮುಟ್ಟಿತು.
ದುಷ್ಕರ್ಮಿಗಳು ಬೇರೆಡೆ ಕೊಲೆ ಮಾಡಿ ವಾಹನವನ್ನು ಇಲ್ಲಿ ನಿಲ್ಲಿಸಿ ಪರಾರಿಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ರಮಣಗುಪ್ತ, ಡಿವೈಎಸ್ಪಿ ಗಣೇಶ, ಭೇಟಿ ನೀಡಿ ಪರಿಶೀಲಿಸಿದರು. ಮೃತನ ತಂದೆ ನಿಂಗಪ್ಪ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಕುಣಿಗಲ್ ಪೊಲೀಸರು ಮುಂದಿನಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement