'ವ್ಯವಸಾಯ ಕಷ್ಟಕರ'
ಹಾಸನ: ಪ್ರಸಕ್ತ ಸನ್ನಿವೇಶದಲ್ಲಿ ವ್ಯವಸಾಯ ಕಷ್ಟಕರವಾಗಿದೆ ಎಂದು ಮಡೆನೂರು ಕೃಷಿ ಕಾಲೇಜಿನ ಡೀನ್ ಡಾ.ಎಲ್. ಮಂಜುನಾಥ್ ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಭೂಚೇತನ ಯೋಜನಾ ಕಾರ್ಯಾಗಾರ ಮತ್ತು ಹವಾಮಾನ ವೈಪರೀತ್ಯ ಕುರಿತ ತರಬೇತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಕ್ರಾಂತಿಗೆ ಒತ್ತು ನೀಡಿ: ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಗಮನಹರಿಸಬೇಕು. ಶೇ. 30ರಷ್ಟು ಜನ ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡಿದ್ದಾರೆ ತಮ್ಮ ಯೋಚನಾ ಲಹರಿಯಿಂದ ಕೃಷಿ ಮೌಲ್ಯವರ್ಧನೆ ಮಾಡಿಕೊಂಡು ಉನ್ನತ ಪ್ರಗತಿ ಸಾಧಿಸಲಿ ಎಂದರು.
ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ. ಬಸವರಾಜು ಮಾತನಾಡಿ, ಹವಾಮಾನ ವೈಪರೀತ್ಯದಿಂದ ಶೇ. 4ರಿಂದ 9ರಷ್ಟು ಇಳುವರಿ ಕಡಿಮೆಯಾಗುತ್ತಿದೆ. ಕೆರೆ ನೀರು ನಿರ್ವಹಣೆ ಹಾಗೂ ನೀರು ಇಂಗಿಸುವ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿ ಹಸಿರು ಕ್ರಾಂತಿಗೆ ಒತ್ತು ನೀಡಬೇಕು ಎಂದರು.
ಮುತುವರ್ಜಿ: ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಕೆ.ಎಂ. ಕೃಷ್ಣಮೂರ್ತಿ ಮಾತನಾಡಿ, ಜಲಾನಯನ ಇಲಾಖೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಸ್ಥಳಗಳಲ್ಲಿ ಭೂಚೇತನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದರು.
ಸಹಕಾರ: ರೈತರ ಉತ್ತಮ ಒಡನಾಟ ಹೊಂದಿರುವವರ ಮೂಲಕ ಇಲಾಖೆ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ನಿರ್ದೇಶಕ ಮುನೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಭೂಚೇತನ ಕಾರ್ಯಕ್ರಮ ಮಹಾತ್ವಕಾಂಕ್ಷಿ ಯೋಜನೆಯಾಗಿದ್ದು, ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದರ ಮೂಲಕ ಉತ್ತಮವಾಗಿ ಅನುಷ್ಠಾನಗೊಳಿಸಬೇಕು ಎಂದರು.
ಕೃಷಿ ಸಹಾಯಕ ನಿರ್ದೇಶಕ ಎ.ಎಸ್. ಕೋಕಿಲ ಸ್ವಾಗತಿಸಿದರು. ಡಾ. ಭಾನುಪ್ರಕಾಶ್ ವಂದಿಸಿದರು. ಯೋಗೀಶ್ ನಿರೂಪಿಸಿದರು. ಸಹಾಯಕ ಕೃಷಿ ಅಧಿಕಾರಿ ನವೀನ್ ಪ್ರಾರ್ಥಿಸಿದರು.