'ಶಿಕ್ಷಣ ಸಾಂಸ್ಕೃತಿಕವಾಗಿ ಮಾರ್ಪಾಡಾಗಲಿ'
ಹಾಸನ: ಶಿಕ್ಷಣ ಸಾಂಸ್ಕೃತಿಕವಾಗಿ ಮಾರ್ಪಾಡಾಗುವವರೆಗೂ ಅದೊಂದು ಕಾರ್ಖಾನೆಯಾಗಿಯೇ ಉಳಿಯುತ್ತದೆ ಎಂದು ಕಬ್ಬಿನಾಲೆ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಪ್ರೊ. ಕಬ್ಬಿನಾಲೆ ವಸನ್ತ ಭಾರದ್ವಾಜ್ ಅಭಿಪ್ರಾಯಪಟ್ಟರು.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ನಮ್ಮ ಸಂಸ್ಕೃತಿಯನ್ನು ಹಾಳು ಮಾಡಿದ ಸಲುವಾಗಿ ಸ್ವತಂತ್ರ್ಯ ಚಳುವಳಿ ಆರಂಭವಾಗಲು ಕಾರಣವಾಯಿತು. ಆದರೆ, ಸ್ವಾತಂತ್ರ್ಯದ ನಂತರ ನಮ್ಮ ಜನ ರಾಜಕೀಯಕ್ಕೆ ಹೆಚ್ಚು ಆದ್ಯತೆ ನೀಡಿದ್ದಾರೆಯೇ ಹೊರತು ಸಂಸ್ಕತಿಗೆ ಒತ್ತು ನೀಡಲಿಲ್ಲ. ಶಿಕ್ಷಣದಿಂದ ಮಾತ್ರ ಯಾವುದೇ ವ್ಯಕ್ತಿ ಜೀವನದಲ್ಲಿ ಹದವಾಗಲು ಸಾಧ್ಯ. ಶಿಕ್ಷಣ ಇಲ್ಲವಾದರೆ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳಿಗೆ ಸಂವಹನ ಕೌಶಲ್ಯ ಬಹುಮುಖ್ಯವಾಗಿದ್ದು, ಇದರೊಂದಿಗೆ ಜ್ಞಾನ ಮತ್ತು ಮನೋಭಾವ ಅತ್ಯಗತ್ಯ. ಆದರೇ ಇತ್ತೀಚಿನ ವಿದ್ಯಾರ್ಥಿಗಳು ಕೇವಲ ಜ್ಞಾನವನ್ನು ಮಾತ್ರ ಪಡೆದುಕೊಳ್ಳುತ್ತಿದ್ದು, ಸಂವಹನ ಕೌಶಲ್ಯದ ಮನೋಭಾವ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ವಿಷಾದಿಸಿದರು.
ಋಣ ತೀರಿಸಬೇಕು: ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜು ಶಿಕ್ಷಣ ಇಲಾಖೆಯ, ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಮಹೇಶ್ವರಪ್ಪ ಮಾತನಾಡಿ, ಸಮಾಜದಲ್ಲಿ ಪ್ರಸ್ತುತವಾಗಿ ಜಾತಿ, ಧರ್ಮ ಹಾಗೂ ಭ್ರಷ್ಟಾಚಾರ ಎದ್ದು ಕಾಣುತ್ತಿದೆ. ಇವೆಲ್ಲವನ್ನು ಮೆಟ್ಟಿ ನಿಲ್ಲುವ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ಸಮಾಜದಿಂದ ಎಲ್ಲಾ ಅನುಕೂಲ ಪಡೆದುಕೊಳ್ಳುವ ನಾವು ಸಮಾಜದ ಋಣವನ್ನು ಹೇಗೆ ತಿರುಸುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.
ಕಾಲೇಜು ಪ್ರಾಂಶುಪಾಲ ಪ್ರೊ.ಎಚ್.ಎನ್. ರೂಪ್ ರಾಜ್ ಚಂದನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಂಸ್ಕೃತಿಕ ವೇದಿಕೆ ಸಂಚಾಲಕ ಕೆ. ಗುರುರಾಜ್ ಹಾಗೂ ಕಾಲೇಜಿನ ಎಲ್ಲಾ ವಿಭಾಗದ ಅಧ್ಯಾಪಕರು ಮತ್ತು ಸಿಬ್ಬಂದಿ ಹಾಜರಿದ್ದರು.