ಸಾಹಿತ್ಯ ವ್ಯಕ್ತಿ ವಿಕಸನತನಕ್ಕೆ ಪೂರಕ: ತಮ್ಮಯ್ಯ
ಮಾಲೂರು: ಮೌಲ್ಯಧಾರಿತ ಸಾಹಿತ್ಯಗಳು ವ್ಯಕ್ತಿ ವಿಕಸನತನಕ್ಕೆ ಕಾರಣವಾಗುವುದರಿಂದ ಪ್ರತಿಯೊಬ್ಬರು ಮೌಲ್ಯಧಾರಿತ ಪುಸ್ತಕಗಳನ್ನು ವಾಚಿಸುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ವಿಮರ್ಶಕ ಮಾ.ವೆಂ. ತಮ್ಮಯ್ಯ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಎರ್ಪಡಿಸಿದ್ದ ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಈ ಹಿಂದೆ ಮುದ್ರಣ ಮಾಧ್ಯಮದ ಕೊರತೆಯಿಂದ ಉತ್ತಮ ಸಾಹಿತ್ಯಗಳಿದ್ದರೂ ಓದಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಟಿ.ವಿ. ಇಂಟರ್‌ನೆಟ್‌ನಿಂದ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.
ಸಾಹಿತಿ ಚಂದ್ರಶೇಖರ್ ನಂಗಲಿ ಮಾತನಾಡಿ, ಪುಸ್ತಕಗಳಿರುವ ವಿಷಯ ಮಸ್ತಕ ಸೇರಿದಾಗ ಮಾತ್ರ ಜೀವನ ಸಾರ್ಥಕತೆ ಹೊಂದಲಿದೆ. ವ್ಯಕ್ತಿ ವಿಕಸನಕ್ಕೆ ಸಹಕಾರಿಯಾಗುತ್ತಿರುವ ಪುಸ್ತಕಗಳು ಎಂದಿಂದಿಗೂ ಮೌಲ್ಯವುಳ್ಳ ಆಸ್ತಿಯಾಗಲಿದ್ದು, ತಾವೂ ಅಭ್ಯಾಸಿಸುವ ಜತೆಯಲ್ಲಿ ಜೋಪಾನ ಮಾಡಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಿ ಎಂದರು. ಬಾಪೂಜಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ವಿ. ಹನುಮಂತಯ್ಯ, ಚು.ಸಾ.ಪ.ಅಧ್ಯಕ್ಷ ಕುಂ. ಚಂದ್ರಪ್ಪ ಮಾತನಾಡಿದರು. ಕವಿ ನಾ. ಗುರುಮೂರ್ತಿ, ಪ್ಲಾಸ್ಟಿಕ್ ಮುನಿಸ್ವಾಮಿ ,ಉಪನ್ಯಾಸಕರಾದ ಮುನಿಯಪ್ಪ, ಅನಂತ್ ಮೂರ್ತಿ, ವಿಶ್ವೇಶ್ವರಯ್ಯ, ಶ್ರೀನಿವಾಸ್, ರಾಮಕೃಷ್ಣಪ್ಪ,ತಿಮ್ಮರಾಯಪ್ಪ ಇದ್ದರು.