'ಗ್ರಾಮೀಣ ಮಕ್ಕಳು ವಿದ್ಯೆ ಕಲಿಬೇಕು'
ಚನ್ನರಾಯಪಟ್ಟಣ: ಗ್ರಾಮೀಣ ಭಾಗದ ಮಕ್ಕಳು ವಿದ್ಯಾವಂತರಾಗಬೇಕೆಂಬ ದೂರದೃಷ್ಟಿಯಿಂದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯನ್ನು 4ರಿಂದ 450ಕ್ಕೇರಿಸಿದ ಕೀರ್ತಿ ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಸಲ್ಲುತ್ತದೆ ಎಂದು ಆದಿ ಚುಂಚನಗಿರಿಯ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.
ಅವರು ಪಟ್ಟಣದ ಆದಿಚುಂಚನಗಿರಿ ಕಾಲೇಜಿನ ಕುವೆಂಪು ರಂಗಮಂದಿರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪ್ರಥಮದರ್ಜೆ ಕಾಲೇಜಿನ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಆಶೀರ್ವಚನ ನೀಡಿದರು. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದ ಬಾಲಗಂಗಾಧರ ಶ್ರೀಗಳು ಶೇ. 60 ಭಾಗದ ಕೆಲಸ ಪೂರೈಸಿದ್ದಾರೆ. ಉಳಿದ ಕೆಲಸಗಳನ್ನು ಈಗ ಈಡೇರಿಸಲಾಗುತ್ತದೆ ಎಂದರು. ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎನ್.ಸಿ.ಸಿ. ಸಿ.ರಾಜೇಶ್, ಸಿ.ಪಿ. ರಘು, ಡಿ.ಪಿ. ರಮೇಶ್, ವಿದ್ಯಾಶ್ರೀ, ಎನ್ಎಸ್ಎಸ್- ಡಿ. ಸಚ್ಚಿದಾನಂದ, ನಿರ್ಮಲ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸಿ.ಆರ್. ವೆಂಕಟೇಶ್, ಡಿ.ಸಿ.ಮಂಜೇಶ. ಕ್ರೀಡೆ-ಕಬಡ್ಡಿ ಪಟು ಸಿ.ಬಿ. ಲವಣ್ಣ, ಆರ್.ಎಸ್. ಸ್ವಾಮಿ, ಷಟಲ್ ಬ್ಯಾಂಡ್ಮಿಂಟನ್- ಅರುಣ್ ಹಾಗೂ ರವೀಶ್, ಅಥ್ಲೆಟಿಕ್ಸ್ನಲ್ಲಿ ಬಿ.ಎ. ಮಾನಸ ಬಹುಮಾನ ಸ್ವೀಕರಿಸಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ನಾಗಮಂಗಲ ಕಾಲೇಜಿನ ಸಹ ಪ್ರಾಧ್ಯಾಪಕ ರಾಮು, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಸ್. ರಾಮೇ ಗೌಡ, ಚಂದ್ರೇಗೌಡ, ಬಿಇಡಿ ಪ್ರಾಂಶುಪಾಲ ಡಾ. ರಘು, ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಪಟು ಬರಾಳು ಪ್ರಕಾಶ್ ಇದ್ದರು.