ಮದ್ವೆ ಊಟ ಉಂಡು ಆಸ್ಪತ್ರೆ ಸೇರಿದರು!
ಹೊಳೆನರಸೀಪುರ: ಗ್ರಾಮದಲ್ಲಿನ ಮದುವೆಯಲ್ಲಿ ಊಟ ಮಾಡಿದ 45ಕ್ಕೂ ಹೆಚ್ಚು ಜನರಿಗೆ ಇದ್ದಕ್ಕಿದ್ದಂತೆ ವಾಂತಿ, ಭೇದಿ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡು ಅಸ್ವಸ್ಥರಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ಯಡೇಗೌಡನಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ಗ್ರಾಮದಲ್ಲಿ ಗುರುವಾರನಾಲ್ಕು ಮದುವೆಗಳು ನಡೆದಿದ್ದವು. ಇದರಲ್ಲಿ ರಾಜೇಗೌಡ ಎಂಬವರ ಮನೆಯ ಮದುವೆಯಲ್ಲಿ ಊಟ ಮಾಡಿ ಮನೆಗೆ ತೆರಳಿದ ಗ್ರಾಮದಲ್ಲಿನ 45ಕ್ಕೂ ಹೆಚ್ಚು ಜನರಿಗೆ ಸಂಜೆ ವೇಳೆಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಕೂಡಲೇ ಎಲ್ಲರನ್ನೂ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಆಂಬ್ಯುಲೆನ್ಸ್ ಹಾಗೂ 108ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಟಿ.ಎಸ್. ಲಕ್ಷ್ಮೀಕಾಂತ್ ಹಾಗೂ ವೈದ್ಯ ಡಾ.ಕೆ. ಶ್ರೀನಿವಾಸಮೂರ್ತಿ ಮತ್ತು ಡಾ. ರಾಜೇಶ್ ಅಸ್ವಸ್ಥರಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲು ಮಾಡಿಕೊಂಡಿದ್ದಾರೆ.
ಗುರುವಾರ ರಾತ್ರಿ 11ಗಂಟೆವರೆಗೂ ಅಸ್ವಸ್ಥರಾದವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ ಕೆಲವರಿಗೆ ವಾಂತಿ ಮತ್ತು ಬೇಧಿ ಕೂಡ ಕಾಣಿಸಿಕೊಂಡಿದೆ.
ಆಹಾರದಲ್ಲಿನ ದೋಷವೇ ಅಸ್ವಸ್ಥತೆಗೆ ಕಾರಣವಿರಬಹುದೆಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಯಾವುದೇ ಅಪಾಯ ಇಲ್ಲ ಎಂದು ವೈದ್ಯರ ತಂಡ ತಿಳಿಸಿದೆ.
ಹೊರಗಡೆಯೂ ಹಾಸಿಗೆ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಲ್ಯಾಪ್ರೋಸ್ಕೋಪಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದ ಕಾರಣದಿಂದಾಗಿ ಹಾಗೂ ಆಸ್ಪತ್ರೆಯಲ್ಲಿ ಒಳರೋಗಿಗಳ ಪ್ರಮಾಣವೂ ಹೆಚ್ಚಿದ್ದ ಪರಿಣಾಮವಾಗಿ ಆಹಾರ ದೋಷದಿಂದ ಆಸ್ಪತ್ರೆಗೆ ದಾಖಲಾದ 45ಕ್ಕೂ ಹೆಚ್ಚು ಜನರಿಗೆ ಸೂಕ್ತವಾಗಿ ಹಾಸಿಗೆ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿರಲಿಲ್ಲ.
ಹಾಗಾಗಿ, ಆಸ್ಪತ್ರೆಯಲ್ಲಿನ ಒಳ ಆವರಣದಲ್ಲಿಯೂ ಹಾಸಿಗೆ ಹಾಗೂ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗಿತ್ತು.
ಆರೋಗ್ಯದಲ್ಲಿ ಸುಧಾರಣೆ ಕಂಡವರನ್ನು ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.