ಶಿಕ್ಷಕರಿಗೆ ಟಿಇಟಿ ಕಡ್ಡಾಯ ಬೇಡ
ಅರಸೀಕೆರೆ: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಾಗಿ ಇನ್ನು ಮುಂದೆ ನೇಮಕಗೊಳ್ಳಲು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ತೇರ್ಗಡೆಯಾಗಬೇಕೆಂಬ ಸರ್ಕಾರದ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ತಾಲೂಕು ಘಟಕ ತೀವ್ರ ವಿರೋಧ ವ್ಯಕ್ತಪಡಿಸಿದೆ. ಆದೇಶ ಹೊರಬಿದ್ದ ನಂತರ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಸರ್ಕಾರ ನಿಗದಿ ಪಡಿಸಿರುವ ಶುಲ್ಕದ ಬಗ್ಗೆಯೂ ಎಬಿವಿಪಿ ಗರಂ ಆಗಿದೆ.
ಈ ಬಗ್ಗೆ ಪ್ರತಿಕ್ರಯಿಸಿರುವ ಪದಾಧಿಕಾರಿಗಳಾದ ಮಂಜುನಾಥ್, ಗಿರೀಶ್, ಬಿ.ಇಡಿ., ಡಿ.ಇಡಿ. ಪೂರ್ಣಗೊಳಿಸಿರುವ ಹಾಗೂ ತರಬೇತಿ ಹಂತದಲ್ಲಿರುವ ಅಭ್ಯರ್ಥಿಗಳು ನೇಮಕಾತಿ ಪರೀಕ್ಷೆ ತೆಗೆದುಕೊಳ್ಳಬಹುದಾಗಿದೆ. ಇದೊಂದು ಉತ್ತಮ ಬೆಳವಣಿಗೆ. ಆದರೆ ಸರ್ಕಾರ ಶುಲ್ಕ ನಿಗದಿಯಲ್ಲಿ ಕಡಿತ ಮಾಡಬೇಕಿದೆ ಎಂದರು.
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರು. 500 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರು. 250 ನಿಗದಿಗೊಳಿಸಿರುವುದು ಸರಿಯಲ್ಲ. ವಿಶ್ವವಿದ್ಯಾನಿಲಯ ನಡೆಸುವ ಯುಜಿಸಿ, ಎನ್.ಇ.ಟಿ. ಪರೀಕ್ಷೆಗಳಲ್ಲಿ ಸಾಮಾನ್ಯ ವರ್ಗಕ್ಕೆ ರು. 450, ಹಿಂದುಳಿದ ವರ್ಗಕ್ಕೆ ರು. 225 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರು. 110 ನಿಗದಿಪಡಿಸಿದೆ. ಉನ್ನತ ಶಿಕ್ಷಣದ ಪ್ರವೇಶ ಪರೀಕ್ಷೆಗಳಿಗೆ ಕಡಿಮೆ ಶುಲ್ಕವಿದೆ.
ಕಡಿತಗೊಳಿಸಿ: ಪ್ರಾಥಮಿಕ, ಪ್ರೌಢಶಾಲಾ ಸಾಮಾನ್ಯ ಅರ್ಹತಾ ಪರೀಕ್ಷೆಗೆ ರು. 500 ನಿಗದಿಪಡಿಸಿರುವುದು ಬಡ ಅಭ್ಯರ್ಥಿಗಳ ಪಾಲಿಗೆ ನುಂಗಲಾರದ ಬಿಸಿ ತುಪ್ಪ ಆಗಿದೆ. ಇದು ಬಡ ನಿರುದ್ಯೋಗಿ ಪದವೀಧರ ವಿದ್ಯಾರ್ಥಿಗಳ ಶೋಷಣೆಯಲ್ಲದೇ ಬೇರೇನೂ ಅಲ್ಲ. ಕೂಡಲೇ ಶುಲ್ಕದಲ್ಲಿ ಕಡಿತ ಮಾಡಬೇಕು. ಇಲ್ಲದಿದ್ದಲ್ಲಿ ಪರೀಕ್ಷೆ ಆಯೋಜಿಸಿರುವ ಮಂಡಳಿಯ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.