ಸಕಲೇಶಪುರದಲ್ಲಿ ಪ್ರತಿಭಟನೆ
ಸಕಲೇಶಪುರ: ಶೃಂಗೇರಿ ಬಳಿ ಎಎನ್ಎಫ್ ಗುಂಡೇಟಿಗೆ ಬಲಿಯಾದ ಕಬೀರ್ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಸಿಪಿಐ ಪಿಎಫ್ಐ ವೀರ ಕನ್ನಡಿಗ ಟಿಪ್ಪು ಸೇನೆ ಮತ್ತು ತಾಲೂಕಿನ ಪ್ರಗತಿಪರ ಕಾರ್ಯಕರ್ತರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟಿಸಿದರು.
ಶಂೃಗೇರಿ ತಾಲೂಕಿನ ತನಿಕೋಡು ಅರಣ್ಯ ತಪಾಸಣೆ ಠಾಣೆ ಬಳಿ ಎಎನ್ಎಫ್ ಗುಂಡೇಟಿಗೆ ಬಲಿಯಾದ ಕಬೀರ್ ಪ್ರಕರಣವನ್ನು ಕೂಡಲೇ ಸಿಬಿಐಗೆ ವಹಿಸಬೇಕು. ಇಡಿ ಪ್ರಕರಣ ಎಎನ್ಎಫ್ನ ಬೇಜವಾಬ್ದಾರಿ ನಡವಳಿಕೆ ತೋರಿಸುತ್ತದೆ. ಇದು ಹಲವು ಅನುಮಾನಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ದೂರಿದರು.
ಆಗ್ರಹ: ಎಎನ್ಎಫ್ ಸಿಬ್ಬಂದಿಗೆ ನಕ್ಸಲ್ ಮತ್ತು ಸಾಮಾನ್ಯರು ಯಾರೆಂದು ಗುರುತಿಸುವಷ್ಟು ಸಾಮರ್ಥ್ಯ ಇಲ್ಲ. ಅಲ್ಲಲ್ಲೇ, ಕಾಡಂಚಿನಲ್ಲಿ ಓಡಾಡುವರನ್ನು ನಕ್ಸಲ್ಗಳೆಂದು ತಿಳಿಯುವುದು ಸರಿಯಲ್ಲ. ಆದ್ದರಿಂದ ಇಡಿ ಘಟನೆಯ ಸತ್ಯ ತಿಳಿಯಬೇಕಾದರೆ ಪ್ರಕರಣ ತನಿಖೆಯನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಬೇಕು. ಅಲ್ಲದೇ, ಪ್ರಾಣ ಕಳೆದುಕೊಂಡ ಕಬೀರ್ ಕುಟುಂಬಕ್ಕೆ ರು. 50 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಗುಂಡು ಹಾರಿಸಿದವರನ್ನು ಮತ್ತು ಕಬೀರ್ ಮೃತದೇಹ ಪಡೆಯಲು ಶೃಂಗೇರಿಗೆ ಹೋದ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದವರನ್ನೂ ಬಂಧಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಪಿಎಂನ ಸಂತೋಷ್, ಯೂನಸ್, ಪಿಎಫ್ಐನ ಸಲೀಮ್, ಇಫಆರ್ನ್, ಎಸ್ಕೆ ಎಸ್ಎಸ್ಎಫ್ನ ಅನೇಮಹಲ್ ಅಲಿ, ವೀರ ಕನ್ನಡಿಗ ಟಿಪ್ಪು ಸೇನೆಯ ಸಾದಿಕ್, ಪ್ರಗತಿಪರ ರಂಗದ ಜುಬೈರ್ ಇನ್ನಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.