ಸರ್ಕಾರಿ ಸೀಟು ಕಡಿತ ಬೇಡ
ಕನ್ನಡಪ್ರಭ ವಾರ್ತೆ ಹಾಸನ ಏ. 25
ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವೃತ್ತಿ ಶಿಕ್ಷಣ ಕೋರ್ಸ್ಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳನ್ನು ಕಡಿತಗೊಳಿಸಬಾರದು ಮತ್ತು ಶುಲ್ಕದಲ್ಲಿ ಏರಿಕೆ ಮಾಡಬಾರದೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಗೋಪಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿದರು.
ಸರ್ಕಾರವೇನಾದರೂ ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಕಾಲಹರಣ ಮಾಡಿ ನಂತರ ದಿಢೀರನೆ ವಿದ್ಯಾರ್ಥಿ ವಿರೋಧಿ ನಿರ್ಧಾರ ತೆಗೆದುಕೊಂಡಲ್ಲಿ ಸಹಸ್ರಾರು ಬಡ, ದಲಿತ, ಪ್ರತಿಭಾವಂತ ವಿದ್ಯಾರ್ಥಿಗಳು, ವೃತ್ತಿ ಶಿಕ್ಷಣದಿಂದ ವಂಚಿತರಾಗುತ್ತಾರೆ. ಆದ್ದರಿಂದ ಸರ್ಕಾರ ಯಾವುದೇ ಕಾರಣ ದಿಂದಲೂ ಅವೈಜ್ಞಾನಿಕ ನಿರ್ಧಾರ ಕೈಗೊಳ್ಳಬಾರದೆಂದು ಒತ್ತಾಯಿಸಿದರು. ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಶುಲ್ಕ ನಿಗದಿ ಮತ್ತು ಸೀಟು ಹಂಚಿಕೆ ಮಾಡಬೇಕೆಂದರು.
ಟೀಕೆ: ಪ್ರತಿ ವರ್ಷವೂ ರಾಜ್ಯ ಸರ್ಕಾರ ಖಾಸಗಿ ಆಡಳಿತ ಮಂಡಳಿಯ ಲಾಬಿಗೆ ಮಣಿಯುತ್ತಿದ್ದು, ವಿದ್ಯಾರ್ಥಿಗಳನ್ನು ಕತ್ತಲೆಯಲ್ಲಿಟ್ಟು ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳು ಪ್ರಜಾ ಪ್ರಭುತ್ವ ಮತ್ತು ಪಾರದರ್ಶಕ ವ್ಯವಸ್ಥೆಯನ್ನು ಅಣಕಿಸುವಂತಿದೆ ಎಂದರು.
ಖಂಡನೀಯ: ಖಾಸಗಿ ಅನುದಾನ ರಹಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆರಿಟ್ ಸೀಟಿನ ಕೆ.ಇ.ಎ ಸೀಟಿನ ಶುಲ್ಕ ನಿಗದಿಯಾದರೂ ಬಹಳಷ್ಟು ಕಾಲೇಜುಗಳಲ್ಲಿ ಈ ಶುಲ್ಕವನ್ನು ಕೆ.ಇ.ಎ.ಯಲ್ಲಿ ಡಿ.ಡಿ.ಯ ಮೂಲಕ ಪಾವತಿಸುತ್ತಿದ್ದು. ಪ್ರವೇಶ ನೀಡುವಾಗ ರು. 10,000ದಿಂದ ಒಂದು ಲಕ್ಷ ರು.ವರೆಗೆ ಹೆಚ್ಚಿನ ಶುಲ್ಕ ತೆಗೆದುಕೊಂಡು ಪ್ರವೇಶ ನೀಡಲಾಗುತ್ತದೆ. ಕಳೆದ ವರ್ಷ ಸರ್ಕಾರ ಇಂತಹ ಕಾಲೇಜುಗಳ ವಿರುದ್ಧ ಕ್ರಮ ಜರುಗಿಸುವ ಭರವಸೆ ನೀಡಿದೆಯೇ ಹೊರತು ಯಾಕೆ ವಿದ್ಯಾರ್ಥಿಗಳ ಪರವಾಗಿ ಕ್ರಮ ಜರುಗಿಸಲಿಲ್ಲ. ಹೆಚ್ಚುವರಿ ಶುಲ್ಕ ಪಡೆಯುತ್ತಿರುವ ಕಾಲೇಜುಗಳ ವಿರುದ್ಧ ಕ್ರಮ ಜರುಗಿಸ ದಿರುವುದು, ಇವೆಲ್ಲವನ್ನೂ ನೋಡಿದರೆ ಸರ್ಕಾರ ಖಾಸಗಿ ಆಡಳಿತ ಮಂಡಳಿಗಳ ಪರವಾಗಿ ನಿಂತಿರುವುದು ಸ್ಪಷ್ಟ. ಇದು ಖಂಡನೀಯ ಎಂದರು.
ಕೈಕಟ್ಟಿ ಕುಳಿತ ಸರ್ಕಾರ: ಖಾಸಗಿ ಆಡಳಿತ ಮಂಡಳಿ ಗಳಂತೂ ಕೋಟಿ ಕೋಟಿ ಹಣ ಮಾಡುವುದರಲ್ಲಿ ನಿರತವಾಗಿವೆ. ಶುಲ್ಕ ಮತ್ತು ಡೊನೇಷನ್ ರೂಪದಲ್ಲಿ ಲಕ್ಷಾಂತರ ಹಣವನ್ನು ಸಂಗ್ರಹ ಮಾಡುತ್ತಿದ್ದು, ವೈದ್ಯಕೀಯ ಕೋರ್ಸ್ಗೆ ಸುಮಾರು ರು. 20 ಲಕ್ಷದಿಂದ ರು. 50 ಲಕ್ಷದವರೆಗೆ, ದಂತ ವೈದ್ಯಕೀಯದಲ್ಲಿ ರು. 10 ಲಕ್ಷದಿಂದ ರು. 35 ಲಕ್ಷ, ಇಂಜಿನಿಯರಿಂಗ್ನಲ್ಲಿ ರು. 2 ಲಕ್ಷದಿಂದ ರು. 10 ಲಕ್ಷಗಳವರೆಗೆ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಆಡಳಿತ ಮಂಡಳಿಗಳ ಸೀಟುಗಳಿಂದ ಲಕ್ಷಾಂತರ ಶುಲ್ಕ ಸಂಗ್ರಹ ಮಾಡುವುದಲ್ಲದೇ, ಡೋನೆಷನ್ ರೂಪದಲ್ಲಿ ಕೋಟ್ಯಾಂತರ ರು. ವಸೂಲಿ ಮಾಡುತ್ತಾರೆ. ವೈದ್ಯಕೀಯದ ಸ್ನಾತ್ತಕೋತ್ತರ (ಪಿ.ಜಿ) ಸೀಟುಗಳಿಗಂತೂ ಕೋಟ್ಯಾಂತರ ರು.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಸರ್ಕಾರ ಮಾತ್ರ ಕೈಕಟ್ಟಿ ಕುಳಿತು, ಅವರ ಪರ ನಿಂತಿರುವುದು ಖಂಡನೀಯ ಎಂದರು.
ಪ್ರತಿಭಟನೆಯ ನೇತೃತ್ವವನ್ನು ಎಬಿವಿಪಿ ನಗರ ಕಾರ್ಯದರ್ಶಿ ಲಕ್ಷ್ಮಿಕೇಶವ, ಅಭಿಷೇಕ್ ಇತರರು ವಹಿಸಿದ್ದರು.