ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಎಲೆಕ್ಷನ್ ವೇಳೆ ಲಿಕ್ಕರ್ ಖದರ್!

Mainashree
Updated On : 27 Apr 2014, 12:05 pm

ಹಾಸನ: ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ ನಂತರ ಜಿಲ್ಲಾದ್ಯಂತ 32. 50 ಲಕ್ಷ ಲೀಟರ್ ಮದ್ಯ (ಮಾ.5 ರಿಂದ ಏ.21ವರೆಗೆ) ಮಾರಾಟವಾಗಿದೆ. ಅಬಕಾರಿ ಇಲಾಖೆ ಏನೆಲ್ಲಾ ಕಟ್ಟು ನಿಟ್ಟಿನ ಕ್ರಮ ಜರುಗಿಸಿದ್ದರೂ, ಆ ವೇಳೆ ಅಲ್ಲಲ್ಲಿ ಅಕ್ರಮ ಮದ್ಯ ಮಾರಾಟ ಪ್ರಕರಣ ನಡೆದು, 122 ಮಂದಿಯನ್ನು ಬಂಧಿಸಲಾಗಿತ್ತು.
ಅಲ್ಲದೇ, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ  ಹಾಸನ ನಗರದ 2 ವೈನ್‌ಸ್ಟೋರ್ ಪರವಾನಗಿ ಅಮಾನತು ಮಾಡಲಾಗಿದೆ. ಬಂಧಿಸಿದ 122 ಮಂದಿ ಪೈಕಿ 96 ಮಂದಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರೆ,
41 ಮಂದಿ ಇನ್ನೂ ಜೈಲಿನಲ್ಲಿ ಇದ್ದಾರೆ. 572 ಮದ್ಯ ಲೈಸೆನ್ಸ್‌ದಾರರ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ.
ಕೊರತೆ ನಡುವೆಯೂ ಸಾಧನೆ: ಅಬಕಾರಿ ಇಲಾಖೆ ಸಾಕಷ್ಟು ಸಿಬ್ಬಂದಿ ಕೊರತೆ ನಡುವೆಯೂ ಜಿಲ್ಲಾದ್ಯಂತ 572 ಕಡೆ ದಾಳಿ ಮಾಡಿ, ಚುನಾವಣೆ ವೇಳೆ ಅಕ್ರಮ ಮದ್ಯ ಮಾರಾಟ ತಡೆಗೆ ಯತ್ನಿಸಿದೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಸಿಬ್ಬಂದಿ ಕೊರತೆ ಇರುವುದು ಎಂದು ಹೇಳಲಾಗುತ್ತಿದೆ.
ಅಕ್ರಮ ಮದ್ಯ ಸಾಗಾಣಿಕೆ, ಮಾರಾಟ ಮತ್ತು ದಾಸ್ತಾನು ಮಾಡುತ್ತಿದ್ದ ಮಂದಿವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ನ್ಯಾಯಾಯಲಯದಲ್ಲಿ ದಾವೆ ಹೂಡಲಾಗಿದೆ.
ಮಂಗಳೂರು ಕಡೆಯಿಂದ ಬರುತ್ತಿದ್ದ
ಮಂಗಳೂರು ಕಡೆಯಿಂದ ಅತ್ಯಂತ ಕಳಪೆ ಮದ್ಯ ತಯಾರಿಸಲು ಬಳಸಲ್ಪಡುವ ಮಿಥೆನಾಲ್ ಸ್ಪಿರಿಟ್ ಅನ್ನು ಸಾಗಣೆ ಮಾಡುವ ಟ್ಯಾಂಕರ್ ಮೇಲೆ ತೀವ್ರ ನಿಗಾ ಇಡಲಾಗಿತ್ತು. ಏಕೆಂದರೆ, ಟ್ಯಾಂಕರ್‌ಗಳ ಚಾಲಕರು ದಾರಿ ಮದ್ಯ ಅಕ್ರಮವಾಗಿ ಮಿಥೆನಾಲ್ ಅನ್ನು ಸ್ಥಳೀಯರಿಗೆ ಮಾರಾಟ ಮಾಡುವುದನ್ನು ತಡೆಯಬೇಕಾಗಿತ್ತು.
ಹಾಗಾಗಿ ಮಿಥೆನಾಲ್ ಮಾರಾಟ ವಾಗದಂತೆ ಯಶಸ್ವಿಯಾಗಿ ತಡೆಯಲಾಯಿತು. ತಾಲೂಕು, ನಗರ ಮತ್ತು ಗ್ರಾಮಾಂತರ ಪ್ರದೇಶಗಳ ವೈನ್ ಸ್ಟೋರ್‌ಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದವರ ವಿರುದ್ಧ ಕ್ರಮ ಜರುಗಿಸಲಾಗಿದೆ ಎನ್ನುತ್ತಾರೆ ಅಬಕಾರಿ ಇಲಾಖೆ ಉಪ ಆಯುಕ್ತ ಬಿ.ವಿ.ಹೂವಪ್ಪಗೌಡ.
ರು. 11.79 ಲಕ್ಷ ಮೌಲ್ಯದ ಮದ್ಯ ವಶ
ನಾನಾ ಬಗೆಯ 714.610 ಲೀಟರ್ ಮದ್ಯ ಮತ್ತು 11.870 ಲೀಟರ್ ಬಿಯರ್ ವಶಪಡಿಸಿಕೊಳ್ಳಲಾಗಿದ್ದು,  ಅದರ ಮೌಲ್ಯ ರು.11.79 ಲಕ್ಷ. ಸಕಲೇಶಪುರ, ಬೇಲೂರು, ಹಾಸನ, ಆಲೂರು, ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಚುನಾವಣೆ ವೇಳೆ ಹೆಚ್ಚು ಮದ್ಯ ಮಾರಾಟವಾಗಿದೆ. ಹೊಳೆನರಸೀಪುರ, ಅರಕಲಗೂಡು, ಅರಸೀಕೆರೆ ತಾಲೂಕಿನಲ್ಲಿ ಕಡಿಮೆ ಮಾರಾಟವಾಗಿದೆ.
ಜಿಲ್ಲೆಯಲ್ಲಿ 148 ವೈನ್‌ಸ್ಟೋರ್‌ಗಳು, 74 ಬಾರ್‌ಗಳು, 19 ಎಂಎಸ್‌ಐಎಲ್ ಮದ್ಯದಂಗಡಿಗಳು, 9 ಕ್ಲಬ್‌ಗಳು ಮತ್ತು ಮದ್ಯ ಮಾರಾಟ ಮಾಡಲು ಅವಕಾಶ ಇರುವ 17 ವಸತಿ ಗೃಹಗಳು ಇವೆ.
ಹಾಸನ ನಗರ, ತಾಲೂಕಿನಲ್ಲಿ 38 ವೈನ್‌ಸ್ಟೋರ್‌ಗಳು, ಆಲೂರಿನಲ್ಲಿ 7, ಬೇಲೂರಿನಲ್ಲಿ 13, ಅರಸೀಕೆರೆಯಲ್ಲಿ 22, ಸಕಲೇಶಪುರದಲ್ಲಿ 12, ಅರಕಲಗೂಡಿನಲ್ಲಿ 15 ಮತ್ತು ಚನ್ನರಾಯಪಟ್ಟಣದಲ್ಲಿ 28 ವೈನ ಸ್ಟೋರ್‌ಗಳಿವೆ.
ಶೇ.5ರಷ್ಟು ಸಿಬ್ಬಂದಿ ಕೊರತೆ ಇರುವುದು ಒಂದು ರೀತಿಯಲ್ಲಿ ಅಕ್ರಮ ತಡೆಗೆ ತಡೆಗೋಡೆ ಇದ್ದಂತಾಗಿದೆ.
ಜಿಲ್ಲೆಯ ಅಬಕಾರಿ ಇಲಾಖೆಯಲ್ಲಿ ಶೇ.50ಕ್ಕೂ ಹೆಚ್ಚು  ಸಿಬ್ಬಂದಿ ಕೊರತೆ ಇದೆ. ಇದರಿಂದ ಇಲಾಖೆ ನಿರೀಕ್ಷಿತ ಮಟ್ಟದಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.
ಇಲಾಖೆಯಲ್ಲಿ ಇರಬೇಕಾಗಿದ್ದು 145 ಅಧಿಕಾರಿ, ಅಧಿಕಾರೇತರ ಸಿಬ್ಬಂದಿ. ಇರುವುದು 75 ಮಂದಿ. ಇನ್ನೂ 70 ಹುದ್ದೆಗಳು ಖಾಲಿ, ಖಾಲಿ.... ಇಲಾಖೆ ಸಮರ್ಪಕವಾಗಿ ಕಾರ್ಯನಿರ್ವಹಿಸುವಲ್ಲಿ ಅಬಕಾರಿ ರಕ್ಷಕರ ಪಾತ್ರ ಬಹು ಮುಖ್ಯ, ಸಿಬ್ಬಂದಿ ಕೊರತೆ ಇದೆ. ಅಬಕಾರಿ ಹಿರಿಯ ರಕ್ಷಕರು 11 ಇರಬೇಕು. ಇರುವುದು ಕೇವಲ 1. ಹತ್ತು ಹುದ್ದೆಗಳು ಖಾಲಿ ಇವೆ. ಹಾಗೆಯೇ ಅಬಕಾರಿ ರಕ್ಷಕರು 65 ಮಂದಿ ಬೇಕು. ಇರುವುದು 25 ಮಂದಿ. 40 ಹುದ್ದೆಗಳು ಖಾಲಿ.  ವಾಹನ ಚಾಲಕರು 13 ಮಂದಿ ಇರಬೇಕು. ಇರುವುದು 5, 8 ಚಾಲಕರ ಹುದ್ದೆ ಖಾಲಿ. ಹೀಗೆ ಆನೇಕ ಹುದ್ದೆಗಳು ಖಾಲಿ. ಇದರಿಂದ ಸೂಕ್ತ ರೀತಿಯಲ್ಲಿ ಅಕ್ರಮಗಳನ್ನು ತಡೆಯಲು ಸಾಧ್ಯವಾಗಿಲ್ಲ ಎಂಬುದನ್ನು ತಳ್ಳಿ ಹಾಕುವಂತಿಲ್ಲ.

ದಯಾಶಂಕರ ಮೈಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement