ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಹುಗ್ರಾಮ ನೀರು ಯೋಜನೆಗೆ ಅಸ್ತು

Mainashree
Updated On : 27 Apr 2014, 12:06 pm

ಹೊಳೆನರಸೀಪುರ: ಬಿರು ಬೇಸಿಗೆಯ ತಾಪ ತಾಲೂಕಿನಲ್ಲಿ ದಿನೇ ದಿನೇ ಏರುತ್ತಲೇ ಇದ್ದು, ಮಳೆಯಿಲ್ಲದೇ ಬೇಸಿಗೆಯ ಹೊಡೆತ ಇದೇ ರೀತಿ ಮುಂದುವರಿದಲ್ಲಿ ತಲೆದೋರಬಹುದಾದ ಕುಡಿವ ನೀರಿನ ಸಮಸ್ಯೆ ಎದುರಿಸಲು ತಾಲೂಕು ಆಡಳಿತ ಈಗಾಗಲೇ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದೆ.
ಈ ಬಾರಿಯ ಬೇಸಿಗೆ ಸಮಯದಲ್ಲಿ ತಲೆದೋರಬಹುದಾದ ಕುಡಿವ ನೀರಿನ ಸಮಸ್ಯೆ ಎದುರಿಸುವ ಸಲುವಾಗಿ ಸರ್ಕಾರವು ಬಹುಗ್ರಾಮ ಕುಡಿವ ನೀರಿನ ಯೋಜನೆ ಜಾರಿಗೆ ತಂದಿದೆ. ಕೊಳವೆ ಬಾವಿಗಳನ್ನು ಹೆಚ್ಚು ಹೆಚ್ಚಾಗಿ ತೋಡಿದಲ್ಲಿ ಮುಂದಿನ ದಿನಗಳಲ್ಲಿ ಭೂಮಿಯಲ್ಲಿನ ಅಂತರ್ಜಲ ಮಟ್ಟ ಕಡಿಮೆಯಾಗಬಹುದಲ್ಲದೆ, ನೀರಿನ ಇಳುವರಿ ಕೂಡ ಕುಸಿಯುವ ಸಾಧ್ಯತೆ ಹೆಚ್ಚಿರುವ ಕಾರಣದಿಂದಾಗಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಹು ಗ್ರಾಮ ಕುಡಿವ ನೀರಿನ ಯೋಜನೆ ಜಾರಿಗೆ ತಂದಿದೆ.
ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಆಯಾ ಪ್ರದೇಶದಲ್ಲಿನ ನೀರಿನ ಮೂಲಗಳಾದ ನದಿ ಇಲ್ಲವೇ, ಕಾಲುವೆಗಳಲ್ಲಿ ನೀರಿನ ಲಭ್ಯತೆ ಇದ್ದಲ್ಲಿ ಅದನ್ನು ಒಂದು ಎತ್ತರದ ಕೇಂದ್ರೀಕೃತ ಸ್ಥಳಕ್ಕೆ ಪಂಪ್ ಮಾಡಿ, ಅಲ್ಲಿಂದ ಸುತ್ತಲಿನ ಹಲವು ಗ್ರಾಮಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಯೋಜನೆ ಇದಾಗಿದೆ.
ಈ ನಿಟ್ಟಿನಲ್ಲಿ ಈಗಾಗಲೇ ತಾಲೂಕಿನಲ್ಲಿರುವ ಆದರೆ ಅರಕಲಗೂಡು ಕ್ಷೇತ್ರ ವ್ಯಾಪ್ತಿಗೆ ಸೇರಿರುವ ಹಳ್ಳಿಮೈಸೂರು ಹೋಬಳಿ ವ್ಯಾಪ್ತಿಯಲ್ಲಿ ಸುಮಾರು ರು.10ಕೋಟಿ  ಅಂದಾಜು ವೆಚ್ಚದಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಈಗಾಗಲೇ ಈ ಕಾಮಗಾರಿ ಪ್ರಗತಿಯಲ್ಲಿದೆ.
ಅದೇ ರೀತಿಯಲ್ಲಿ ಕಸಬಾ ಹೋಬಳಿ ಹಾಗೂ ಹಳೇಕೋಟೆ ಹೋಬಳಿಗೆ ಸೇರಿದ ಎಳ್ಳೇಶಪುರ, ಪಡುವಲಹಿಪ್ಪೆ, ಮೂಡಲಹಿಪ್ಪೆ ಹಾಗೂ ವಳಂಬಿಗೆ ಗ್ರಾಮಗಳ ಬಳಿಯಲ್ಲಿ ಸುಮಾರು ರು.23ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿವ ನೀರಿನ ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದ್ದು, ಲೋಕಸಭಾ ಚುನಾವಣೆ  ನೀತಿ ಸಂಹಿತೆ ಕಾರಣದಿಂದಾಗಿ ಈ ಯೋಜನೆ ಆರಂಭಕ್ಕೆ ಕೆಲಕಾಲ ತೊಡಕಾಗಿದೆ  ಎನ್ನಲಾಗಿದೆ.
ಈ ಬೇಸಿಗೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ತಾಲೂಕಿನ 26 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ 113 ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿಯಲಾರಂಭಿಸಿದ್ದು, ನೀರಿನ ಇಳುವರಿ ಕಡಿಮೆಯಾಗುತ್ತಿರುವುದನ್ನು ಸಂಬಂಧಿಸಿದ ಇಲಾಖೆ ಪರಿಶೀಲನೆ ನಡೆಸಿ, ಈ ಕುರಿತಂತೆ ವರದಿಯೊಂದನ್ನು ಸಿದ್ಧಪಡಿಸಿ, ಈಗಾಗಲೇ ಜಿಲ್ಲಾ ಪಂಚಾಯಿತಿಗೆ ವರದಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ನಿಟ್ಟಿನಲ್ಲಿ ಸದರಿ 113 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯು ತಲೆದೋರಿದಲ್ಲಿ ಕೊಳವೆ ಬಾವಿಗಳನ್ನು ಕೊರೆಯುವ ಕಾರ್ಯಕ್ಕೂ ಅನುಮೋದನೆಗಾಗಿ ತಾಲೂಕು ಆಡಳಿತ ಕಾಯುತ್ತಿದೆ.
ಒಟ್ಟಿನಲ್ಲಿ ಬೇಸಿಗೆ ಬಂತೆಂದರೆ ಕುಡಿವ ನೀರಿಗಾಗಿ ಗ್ರಾಮೀಣ ಭಾಗದಲ್ಲಿನ ಜನರು ಪರಿತಪಿಸುವುದನ್ನು ತಪ್ಪಿಸುವ ಸಲುವಾಗಿ ಯಾವುದೇ ಯೋಜನೆಗಳನ್ನಾದರೂ ಸರ್ಕಾರ ಜಾರಿಗೊಳಿಸಲಿ. ಆದರೆ ಆ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡು ಜನ-ಜಾನುವಾರುಗಳಿಗೆ ಅನುಕೂಲಕರವಾದ ನೀರನ್ನು ಹರಿಸಿದಲ್ಲಿ ಯೋಜನೆಗಳ ಉದ್ದೇಶ
ಈಡೇರಿದಂತಾಗುತ್ತದೆ ಎಂಬುದು ತಾಲೂಕಿನ ಗ್ರಾಮೀಣ ಜನರ ಆಶಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement