ಸಮಯ ವ್ಯರ್ಥ ಮಾಡದೆ ಜ್ಞಾನ ಸಂಪಾದಿಸಿ: ಶಂಶಾದ್
ಚನ್ನರಾಯಪಟ್ಟಣ: ಜೀವನವನ್ನು ವ್ಯರ್ಥ ಮಾಡದೆ ಜ್ಞಾನ ಸಂಪಾದಿಸಿ ಎಂದು ಸುವರ್ಣ ಮಹಿಳೆ ಸಾಧಕಿ ಪ್ರಶಸ್ತಿ ಪುರಸ್ಕೃತೆ ಆಟೋ ಚಾಲಕಿ ಶಂಶಾದ್ ಕಿವಿಮಾತು ಹೇಳಿದರು. ಇಲ್ಲಿನ ಉದಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಹಿಳಾ ಸಮಿತಿ, ರಾಜ್ಯಶಾಸ್ತ್ರ ವೇದಿಕೆ ಮತ್ತು ಎನ್‌ಎಸ್‌ಎಸ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಸಮಯ ವ್ಯರ್ಥ ಮಾಡದೆ ಜ್ಞಾನ ಸಂಪಾದನೆ ಮಾಡಿ ಎಂದು ಕಿವಿಮಾತು ಹೇಳಿದರು.ಟೀಚರ್, ಟೈಲರ್ ಹಾಗೂ ಆಟೋ ಡ್ರೈವರ್ ಆಗಿ ಸಮಾಜದಲ್ಲಿ ಕೆಲಸ ನಿರ್ವಹಿಸಿದ್ದೇನೆ. ವರದಕ್ಷಿಣೆ ಪಿಡುಗು ನಮ್ಮನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿತು. ವರದಕ್ಷಿಣೆ ಕಿರುಕುಳದಿಂದ ಗಂಡನನ್ನು ಬಿಟ್ಟು ತವರು ಮನೆಗೆ ಬಂದು ನಂತರ ಬಿ.ಎ. ಮತ್ತು ಬಿ.ಎಡ್. ವ್ಯಾಸಂಗ ಮಾಡಿ ಆಟೋ ಒಂದನ್ನು ಖರೀದಿ ಮಾಡಿ ಬಾಡಿಗೆಗೆ ಬಿಟ್ಟೆ, ಆದರೆ, ಬಾಡಿಗೆದಾರ ಸರಿಯಾಗಿ ಹಣ ನೀಡದ ಕಾರಣ ನಾನೇ ಆಟೋ ಡ್ರೈವರ್ ಆಗಿ 14 ವರ್ಷದಿಂದ ಜೀವನ ನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದರು.ಹಾಗಾಗಿ ವಿದ್ಯಾರ್ಥಿಗಳು ಇಂದಿನಿಂದಲೇ ಉತ್ತಮ ವ್ಯಾಸಂಗ ಮಾಡಿ ಸರ್ಕಾರಿ ಕೆಲಸವನ್ನೇ ಆಶ್ರಯಿಸದೆ ಸಿಕ್ಕ ಕೆಲಸದಲ್ಲಿ ತೃಪ್ತಿ ಹೊಂದಲು ಕಲಿಯಬೇಕು ಎಂದು ಕಿವಿಮಾತು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ನಂಜುಂಡಸ್ವಾಮಿ, ಎನ್‌ಎಸ್‌ಎಸ್ ಅಧಿಕಾರಿ ಶಿವಕುಮಾರ್ ಮತ್ತಿತರರು ಮಾತನಾಡಿದರು.ರೂಪ ಸ್ವಾಗತಿಸಿದರು, ಧನಲಕ್ಷ್ಮಿ ವಂದಿಸಿದರು, ಅರುಣಾ ಪ್ರಾರ್ಥಿಸಿದರು. ಉಮೇಶ್ ನಿರೂಪಿಸಿದರು. ಪ್ರೊ. ಪ್ರಕಾಶ್‌ಕುಮಾರ್, ಪ್ರೊ.ಗಂಗಾಧರಯ್ಯ, ಪ್ರೊ. ವೆಂಕಟೇಶಗೌಡ ಮತ್ತಿತರರು ಉಪಸ್ಥಿತರಿದ್ದರು.