ಉಚಿತ ಶಿರಡಿ ಯಾತ್ರೆ
ಅರಸೀಕೆರೆ: ಆಧುನಿಕತೆ ಜಗತ್ತಿನಲ್ಲಿ ಧರ್ಮ ಆಚರಣೆ ದೂರವಾಗುತ್ತಿದ್ದು, ಹೆತ್ತು ಹೊತ್ತು ಸಾಕಿ ಸಲಹಿದ ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳುಹಿಸುತ್ತಿರುವ ಇಂತಹ ಸಂದರ್ಭದಲ್ಲಿ ಮಾತೃವಾಕ್ಯ ಪರಿಪಾಲನೆಗಾಗಿ ಆವರೊಂದಿಗೆ 100 ಮಂದಿ ಹಿರಿಯರಿಗೆ ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯವನ್ನು ಕಲ್ಪಿಸಿರುವುದು ಸಂತಸದ ಸಂಗತಿ ಎಂದು ಆರ್ಯವೈಶ್ಯ ಸಂಘದ ಗೌರವಾಧ್ಯಕ್ಷ ಕೆ.ಎನ್. ದುರ್ಗಪ್ಪಶೆಟ್ಟಿ ತಿಳಿಸಿದರು.
ಪಟ್ಟಣದ ಪೇಟೆಬೀದಿಯಲ್ಲಿನ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ಶುಕ್ರವಾರ ರಾತ್ರಿ ಆಧ್ಯಾತ್ಮಿಕ ಚಿಂತಕರು ಹಾಗೂ ನಾಟಿ ವೈದ್ಯ ಶ್ರೀಧರಮೂರ್ತಿ ತಮ್ಮ ಮಾತೃಶ್ರೀ ಸಿ.ನವರತ್ನಮ್ಮ ಅವರ 90ನೇ ಹುಟ್ಟು ಹಬ್ಬದ ಅಂಗವಾಗಿ ಅವರ ಮಾತಿನಂತೆ 100 ಮಂದಿ ಹಿರಿಯ ನಾಗರೀಕರಿಗೆ 8 ದಿನಗಳ ಉಚಿತ ಶಿರಡಿ ಶ್ರೀಸಾಯಿನಾಥ ಯಾತ್ರಾ ಪ್ರವಾಸಕ್ಕೆ ಚಾಲನೆ ನೀಡಿ ಅವರು ಮಾತನಾಡಿ ದೇಶಭಕ್ತಿ, ದೇವ ಭಕ್ತಿ, ಮತ್ತು ಮಾತೃ ಭಕ್ತಿ ಸಮಾಜದಲ್ಲಿ ದೂರವಾಗುತ್ತಿರುವ ಕಾರಣ ಸುಖ, ಶಾಂತಿ, ನೆಮ್ಮದಿ ಜೀವನದಲ್ಲಿ ದೂರವಾಗುತ್ತಿದೆ ಎಂದರು.
ಜನ ಮೆಚ್ಚುವ ಕಾರ್ಯ: ಮಕ್ಕಳು ತಮ್ಮ ಪೋಷಕರನ್ನು ವೃದ್ಧಾಶ್ರಮ ಕಲಿಸುವ ಸಂಸ್ಕೃತಿಗೆ ಸೃಷ್ಟಿಯಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಸಿ.ವಿ. ಶ್ರೀಧರಮೂರ್ತಿ ತಮ್ಮ ಮಾತೃಶ್ರೀ ಅವರ 90ನೇ ಹುಟ್ಟು ಹಬ್ಬದ ನೆನಪಿನಲ್ಲಿ ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯಕ್ಕೆ ಅವಕಾಶ ಮಾಡಿರುವುದು ಜನಮೆಚ್ಚುವ ಕಾರ್ಯ ಎಂದು ಶ್ಲಾಘಿಸಿದರು.
ಈ ಬಗ್ಗೆ ಮಾತನಾಡಿದ, ಸಿ.ವಿ. ಶ್ರೀಧರಮೂರ್ತಿ ಮಾತನಾಡಿ, ತಮ್ಮ ತಾಯಿ ಸಿ. ನವರತ್ನಮ್ಮ ಅವರ 90 ವರ್ಷಗಳ ಸವಿ ನೆನಪಿಗಾಗಿ ಹುಟ್ಟು ಹಬ್ಬವನ್ನು ವಿನೂತನವಾಗಿ ಮತ್ತು ಧಾರ್ಮಿಕ ಭಕ್ತಿಭಾವನೆಗಳ ಮೂಲಕ ಆಚರಿಸಲು ಉದ್ದೇಶಿಸಿದ್ದ ಯಾವುದೇ ಜಾತಿಯ ಭೇದ ಭಾವನೆ ಇಲ್ಲದೇ ನಮ್ಮ ಕುಟುಂಬದಲ್ಲಾ ಸದಸ್ಯರೊಂದಿಗೆ ಸುಮಾರು 100 ಮಂದಿ ಹಿರಿಯ ನಾಗರಿಕರಿಗೆ ಕಲಿಯುಗದ ಆರಾಧ್ಯ ದೈವ ಶ್ರೀ ಶಿರಡಿ ಸಾಯಿನಾಥರವರ ದರ್ಶನ ಭಾಗ್ಯ ಪಡೆಯಲು ಯಾತ್ರೆ ಆರಂಭಿಸಲಾಗಿದೆ ಎಂದರು.
ಎಲ್ಲೆಲ್ಲಿ ಯಾತ್ರೆ: ಸುಮಾರು 8 ದಿನಗಳಲ್ಲಿ ಕೂಡಲಸಂಗಮ, ಬಿಜಾಪುರ, ಪಂಡರಾಪುರ, ಶನಿಸಿಂಗ್ನಾಪುರ, ದೇವಗಡ, ಅಜಂತಾ, ಎಲ್ಲೋರಾ, ಶಿರಡಿ, ನಾಸಿಕ್, ತ್ರಯಂಬಕೆಶ್ವರ, ವಜ್ರೇಶ್ವರಿ ಗಣೇಶ್ವರಿ, ಬಾಂಬೆ ಮಾರ್ಗವಾಗಿ ಪಟ್ಟಣಕ್ಕೆ ವಾಪಸು ಬರಲಾಗುವುದು ಎಂದು ಹೇಳಿದರು.
ಡಾ.ಕೆ.ಎಸ್. ಹರಶಿವಮೂರ್ತಿ ಪ್ರಾಸ್ತಾವಿಕ ಭಾಷಣ ಮಾಡಿದರು. ಎಚ್.ಜಿ. ಸತ್ಯನಾರಾಯಣಶೆಟ್ಟಿ, ಸಹಕಾರ್ಯದರ್ಶಿ ವೆಂಕಟೇಶ್ ಬಾಬು, ಪುರಸಭಾ ಸದಸ್ಯ ಪಾರ್ಥಸಾರಥಿ ಯಾತ್ರಿಕರಿಗೆ ಶುಭ ಕೋರಿ ಮಾತನಾಡಿದರು. ಗಾಯತ್ರಿ ಪ್ರಾರ್ಥಿಸಿದರು, ಶಿಕ್ಷಕ ಎಂ.ಸಿ. ಮಂಜುನಾಥ್ ಸ್ವಾಗತಿಸಿ, ಶ್ರೇಯಸ್ ವಂದಿಸಿದರು. ಶ್ರೀಕನ್ನಿಕಾ ಪರಮೇಶ್ವರಿ ದೇವರಿಗೆ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.