ಒಡೆದ ಮನೆಯಾದ ನಗರಸಭೆ
ಹಾಸನ: ಇದು ನಿಜಕ್ಕೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಶೋಭೆ ತರುವಂಥದ್ದಲ್ಲ. ಪಕ್ಷಬೇಧ ಮರೆತು ಅಭಿವೃದ್ಧಿ ಮಂತ್ರ ಪಠಿಸಬೇಕಾದ ಹಾಸನ ನಗರಸಭೆ ಅಧ್ಯಕ್ಷರು, ಸದಸ್ಯರು ಮತ್ತು ಆಯುಕ್ತರು ಜಟಾಪಟಿಗೆ ಇಳಿದಿರುವುದು ವಿಪರ್ಯಾಸಕರ ಸಂಗತಿ.
ಪರಸ್ಪರ ಅನ್ಯೋನ್ಯವಾಗಿ ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ಕೆಲಸಗಳನ್ನು ಮಾಡಬಹುದು. ಇಲ್ಲದಿದ್ದರೆ ಸಾಧ್ಯವೇ ಇಲ್ಲ ಎಂಬ ಕೊಂಚ ವಿವೇಕ ಹಾಸನ ನಗರಸಭೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಇದ್ದಂತೆ ಇಲ್ಲ. ಆಯುಕ್ತರು ಮತ್ತು ಸದಸ್ಯರ ನಡುವೆ ಜಟಾಪಟಿಯೇ ನಡೆಯುತ್ತಿದೆ. ಇದರ ಪರಿಣಾಮ ನಗರದ ಸ್ವಚ್ಚತೆ ಮತ್ತಿತರ ಅಭಿವೃದ್ಧಿ ಕಾರ್ಯಗಳ ಮೇಲೆ ದುಷ್ಪರಿಣಾಮ ಬೀರಿದೆ.
ಸಮಸ್ಯೆ ಕಡೆ ಗಮನವಿಲ್ಲ: ಹಾಸನ ನಗರದ 35 ವಾರ್ಡ್ಗಳಲ್ಲಿ ಬೆಟ್ಟದಷ್ಟು ಸಮಸ್ಯೆಗಳಿವೆ. ಕುಡಿಯುವ ನೀರಿನ ಸಮಸ್ಯೆ ಸಾಕಷ್ಟು ಇದೆ. ಸ್ವಚ್ಛತೆ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ, ಬೀದಿ ನಾಯಿಗಳ ಹಾವಳಿ ಸಿಕ್ಕಾಪಟ್ಟೆಯಾಗಿದೆ. ರಸ್ತೆಗಳು ಗುಂಡಿಮಯವಾಗಿವೆ. ಇದರತ್ತ ಗಮನ ಕೊಡದೇ ವೈಯಕ್ತಿಕ ಕಾರಣಗಳಿಗಾಗಿ ಟೀಕೆ, ಟಿಪ್ಪಣೆ ಮಾಡುವುದು, ಪ್ರತಿಭಟನೆ ಮಾಡುವುದು ಮತ್ತು ಪ್ರತಿಭಟನೆ ಮಾಡಿಸುವ ಕಾಯಕದಲ್ಲಿ ನಿರತರಾಗಿರುವುದು ಜನರಲ್ಲಿ ಅಸಹ್ಯ ಉಂಟು ಮಾಡಿದೆ.
ರೋಡಿಗಿಳಿದ ಅಧ್ಯಕ್ಷೆ: ಅಧ್ಯಕ್ಷೆ ಶ್ರೀ ವಿದ್ಯಾ ಅವರು, ಆಯುಕ್ತರು ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸದೇ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಮತ್ತು ನಗರಸಭೆ ಸಾಮಾನ್ಯ ಸಭೆಗಳನ್ನು ತಮಗೆ ಸೌಜನ್ಯಕ್ಕಾದರೂ ತಿಳಿಸದೇ ಕರೆಯುತ್ತಿದ್ದಾರೆ. ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ನಗರಸಭೆ ಆಯುಕ್ತರು ಕೆಲಸ ಮಾಡದೇ ಏಕಾಏಕಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಜನಪರವಾದ ಕೆಲಸಗಳನ್ನು ಮಾಡಲಿಕ್ಕೆ ಸಾಧ್ಯವಾಗುತ್ತಿಲ್ಲ ಎಂಬುದು ನಗರಸಭೆ ಅಧ್ಯಕ್ಷೆ ಶ್ರೀ ವಿದ್ಯಾ ಸೇರಿದಂತೆ ಜೆಡಿಎಸ್ನ ಎಲ್ಲಾ ಸದಸ್ಯರ ಆರೋಪ.
ಅಭಿವೃದ್ಧಿಗೆ ಏಕೆ ಜಾತಿ?: ಹಾಗೆ ನೋಡಿದರೇ ನಗರಸಭೆ ಶ್ರೀ ವಿದ್ಯಾ ಕೂಡ ದಲಿತ ಸಮಾಜದವರೇ. ಆಯುಕ್ತರು ಅದೇ ಸಮಾಜದವರು. ಹೀಗಿರುವಾಗ ಪಕ್ಷ ಮತ್ತು ಜಾತಿ ಆಧಾರದ ಮೇಲೆ ಜಟಾಪಟಿಗೆ ಇಳಿಯುವುದು ಎಷ್ಟು ಸರಿ? ಎಂಬುದು ನಾಗರಿಕ ವೇದಿಕೆ ಸಂಚಾಲಕ ಕೃಷ್ಣಮೂರ್ತಿಯವರ ಅಸಮಾಧಾನ.
ವಿಸರ್ಜನೆ ಆಗ್ರಹಕ್ಕೆ ವಿಷಾದ: ಆಯುಕ್ತರ ಪರ ಪ್ರತಿಭಟನೆ ನಡೆಸಿದ ದಲಿತ ಮುಖಂಡರು ಕ್ಷುಲ್ಲಕ ಕಾರಣಗಳಿಗೆ ನಗರಸಭೆಯನ್ನು ಸೂಪರ್ ಸೀಡ್ (ವಿಸರ್ಜನೆ ) ಮಾಡಬೇಕು ಎಂದು ಆಗ್ರಹಿಸಿರುವುದು ಸರಿಯಲ್ಲ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಇರುವ ನಗರಸಭೆ ಆಡಳಿತವನ್ನು ವಿರ್ಸಜನೆ ಮಾಡಿ ಎಂದು ಹೇಳುವುದು ಪ್ರಜಾಪ್ರಭುತ್ವವಾದಿಗಳ ಲಕ್ಷಣವಲ್ಲ. ಆರೋಪ, ಟೀಕೆ ಮಾಡುವ ಬದಲು ನಗರಸಭೆಯಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಿಸುವ ಮೂಲಕ ಅಭಿವೃದ್ಧಿ ಕೆಲಸಗಳು ನಡೆಯುವಂತೆ ಮಾಡುವ ಕಾಳಜಿಯನ್ನು ಕೂಡ ಸಂಘಟನೆಗಳು ಪ್ರದರ್ಶಿಸಬೇಕು.
ಅದು ಅಧಿಕಾರಿಶಾಹಿ ಪರ ನಿಂತರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗುತ್ತಿದೆ.
ಅಧ್ಯಕ್ಷರು ಹೇಳೋದೇನು ?
ನಾನು ಒಬ್ಬ ದಲಿತ ಮಹಿಳೆ. ಅಧ್ಯಕ್ಷೆಯಾಗಿ ಸಾಧ್ಯವಾದಷ್ಟು ಕೆಲಸ ಮಾಡುತ್ತಿದ್ದೇನೆ. ಆದರೆ ಆಯುಕ್ತರು, ಸರಿಯಾಗಿ ನಡೆದುಕೊಳ್ಳದೇ ಪ್ರತಿ ದಿನ ಅವಮಾನ ಮಾಡುತ್ತಿದ್ದಾರೆ.. ಜನಪ್ರತಿನಿಧಿಗಳಿಗೆ ಅಗೌರವ ತೋರುತ್ತಾ ಒಂದು ಪಕ್ಷದ ಪರ ನಿಲ್ಲುವ ಆಯುಕ್ತರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಜನರ ನಿರೀಕ್ಷೆಯಂತೆ ನಗರಸಭೆ ಸದಸ್ಯರು ಕೆಲಸ ಮಾಡುವುದು ಕಷ್ಟವಾಗುತ್ತದೆ.
ದಯಾಶಂಕರ ಮೈಲಿ