ಧರೆಗುರುಳಿದ ಮರಗಳು
ಸಕಲೇಶಪುರ: ತಾಲೂಕಿನ ನಾನಾ ಕಡೆ ಶನಿವಾರ ರಾತ್ರಿ ಬೀಸಿದ ಬಿರುಗಾಳಿಯಿಂದಾಗಿ ಹಲವಾರು ಮರಗಳು ಧರೆಗುರುಳಿದ್ದು, ಮನೆಯ :ಯಾವಣಿಗಳು ಹಾರಿಹೋಗಿ ಅಪಾರ ಹಾನಿ ಸಂಭವಿಸಿದೆ.
ಶನಿವಾರ ರಾತ್ರಿ 8ರಿಂದ 9ರವರೆಗೆ ಭಾರೀ ಗುಡುಗು- ಸಿಡಿಲಿನಿಂದ ಕೂಡಿದ ಬಿರುಗಾಳಿಯಿಂದಾಗಿ ಅರೆಕೆರೆ ಗ್ರಾಮದ ಶಾಂತಪ್ಪ ಎಂಬುವವರ ಕೊಟ್ಟಿಗೆಯ ಶೀಟುಗಳು ಹಾರಿಹೋಗಿದ್ದು ಅಪಾರ ಹಾನಿ ಸಂಭವಿಸಿದೆ.
ಆಚಂಗಿ ಬಡವಾಣೆಯ ಅಮಿನಾಭಿ ಎಂಬವರ ಮನೆಯ ಛಾವಣಿ ಶೀಟುಗಳು ಹಾರಿ ಹೋಗಿದ್ದರಿಂದ ಮನೆಯ ಸದಸ್ಯರು ರಾತ್ರಿಯಿಡೀ ಜೀವಭಯದಲ್ಲಿ ಮನೆಯ ಹೊರಗೆ ರಾತ್ರಿ ಕಳೆಯುವಂತಾಯಿತು.
ಕುಡುಗರಹಳ್ಳಿ ಬಡಾವಣೆಯ ದೇವರಾಜ್ ಶೆಟ್ಟಿ ಎಂಬ ವೃದ್ಧರ ಮನೆಯ ಮೇಲೆ ಮರಬಿದ್ದು ಮನೆ ಹಾನಿಗೊಂಡಿದೆ. ಪಟ್ಟಣದ ಮಿಲ್ಟ್ರಿಕ್ಯಾಂಪ್ ಸಮೀಪ ವಿದ್ಯುತ್ ತಂತಿಯ ಮೇಲೆ ಮರಗಳು ಉರುಳಿರುವ ಪರಿಣಾಮ ಇಡೀ ಭಾನುವಾರ ವಿದ್ಯುತ್ ತೊಂದರೆ ಎದುರಿಸಬೇಕಾಯಿತು.
ವಿದ್ಯುತ್ ತಂತಿಯ ಮೇಲೆ ಮರಗಳು ಉರುಳಿರುವ ಪರಿಣಾಮ ಪಟ್ಟಣ ಹೊರತುಪಡಿಸಿ, ಗ್ರಾಮೀಣ ಪ್ರದೇಶದ ಬಹುತೇಕ ಭಾಗದಲ್ಲಿ ಇಡೀ ದಿನ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತ್ತು.