ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಾಲೆ ನವೀಕರಣಕ್ಕೆ 30 ಕೋಟಿ

Mainashree
Updated On : 27 Apr 2014, 11:25 am

ಹೊಳೆನರಸೀಪುರ: ತನ್ನನ್ನು ನಂಬಿದ ಜನರಿಗೆ ದಣಿವರಿಯದೇ ನಿರಂತರವಾಗಿ ನೀರುಣಿಸುತ್ತ, ಕಾವೇರಿ ಕೊಳ್ಳದ ವ್ಯಾಪ್ತಿಯಲ್ಲಿನ ಜಿಲ್ಲೆಯ ಜೀವನದಿ ಹೇಮಾವತಿಯ ಜೀವಸೆಲೆಯಂತಿರುವ ತಾಲೂಕಿನ ಕಟ್ಟೇಬೆಳಗುಲಿ ಸಮೀಪದಲ್ಲಿ ನಿರ್ಮಿತವಾಗಿರುವ ಶ್ರೀರಾಮದೇವರ ಅಣೆಕಟ್ಟೆ ಶಿಥಿಲಗೊಳ್ಳುತ್ತಿದೆ.
ಇದನ್ನು ಮನಗಂಡ ಕಾವೇರಿ ನೀರಾವರಿ ನಿಗಮವು 144 ವರ್ಷಗಳ ಹಿಂದೆ ನಿರ್ಮಿತಗೊಂಡಿದ್ದ ಈ ಅಣೆಕಟ್ಟೆಯನ್ನು ಸುಮಾರು ರು. 30 ಕೋಟಿ ಅಂದಾಜು ವೆಚ್ಚದಲ್ಲಿ ನವೀಕರಣಕ್ಕೆ ಮುಂದಾಗಿದೆ.
ನಿರ್ಲಕ್ಷ್ಯಕ್ಕೊಳಗಾಗಿತ್ತು: ಶತಮಾನಗಳ ಕಾಲ ನಿರಂತರವಾಗಿ ತನ್ನೊಡಲಲ್ಲಿ ನೀರು ತುಂಬಿಕೊಂಡು, ಅವಶ್ಯಕ ಸಂದರ್ಭದಲ್ಲಿ ಅವಶ್ಯಕವಾದಷ್ಟೂ ನೀರನ್ನು ಅಗತ್ಯತೆಗೆ ತಕ್ಕಂತೆ ಹರಿಸುತ್ತಲೇ, ಕೇವಲ ಕೃಷಿಗಷ್ಟೇ ಉಪಯುಕ್ತವಾದ ಅಣೆಕಟ್ಟೆಯಷ್ಟೇ ಆಗದೇ, ಪ್ರವಾಸಿಗರಿಗೆ ಮೆಚ್ಚಿನ ಪ್ರೇಕ್ಷಣೀಯ ಸ್ಥಳವೂ ಆಗಿದ್ದ ಶ್ರೀರಾಮದೇವರ ಅಣೆಕಟ್ಟೆ ಇತ್ತೀಚಿನ ವರ್ಷಗಳಲ್ಲಿ ಸಂಬಂಧಿಸಿದ ಇಲಾಖೆಯ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿ ಹಾಳು ಕೊಂಪೆಯಾಗಿ, ಸ್ಮಶಾನ ಮೌನದಿಂದ ತುಂಬಿರುವ ಸ್ಥಳದಂತೆ ಭಾಸವಾಗುತ್ತಿತ್ತು.
ಈಗ 144 ವರ್ಷಗಳಷ್ಟು ಹಳೆಯದಾದ ಈ ಅಣೆಕಟ್ಟೆಯ ನವೀಕರಣಕ್ಕೆ ಈ ಹಿಂದೆಯೂ ಹಲವಾರು ಬಾರಿ ಯೋಜನೆಗಳನ್ನು ಸಿದ್ಧಪಡಿಸಿದ್ದಲ್ಲದೇ, ಅಣೆಕಟ್ಟೆಯ ಮೇಲ್ಬಾಗದಲ್ಲಿನ ವಿಶಾಲವಾದ ಮೈದಾನವನ್ನು ಸುಂದರ ಉದ್ಯಾನವನ್ನಾಗಿ ಪರಿವರ್ತಿಸಿ ಸುಂದರ ಪ್ರವಾಸಿ ತಾಣವನ್ನಾಗಿಸುವ ಕುರಿತಂತೆಯೂ ಈ ಹಿಂದೆ ಹಲವು ಪ್ರಯತ್ನಗಳು ನಡೆದಿದ್ದವು.
ನಾಶವಾದ ನದಿ ದಂಡೆ: ಶತಮಾನ ಕಳೆದರೂ ಸದೃಡವಾಗಿಯೇ ಇದ್ದ ಈ ಅಣೆಕಟ್ಟೆಗೆ ಇತ್ತೀಚಿನ ಆರೇಳು ವರ್ಷಗಳಿಂದ ಈಚೆಗೆ ತಾಲೂಕಿನಲ್ಲಿ ವ್ಯಾಪಕವಾಗಿ ಹಬ್ಬಿದ ಮರಳು ದಂಧೆಯು ನಂತರದಲ್ಲಿ ಮರಳು ಮಾಫಿಯಾ ಆಯಿತು. ಇಲ್ಲಿನ ಮರಳಿಗೆ ಹೊರಭಾಗಗಳಲ್ಲಿ ಚಿನ್ನದ ಬೆಲೆ ಬಂದ ಕೂಡಲೇ ನದಿ ಪಾತ್ರದಲ್ಲಿನ ಎಲ್ಲರೂ ಅನಧಿಕೃತವಾಗಿ ರಾಜಾರೋಷವಾಗಿಯೇ ಮರಳನ್ನು ಹೊಳೆಯಿಂದ ತೆಗೆಯಲು ಮುಂದಾದರು. ಮರಳು ಮಾಫಿಯಾದವರ ಹಣ ಮಾಡುವ ಹಪಹಪಿಗೆ ತಾಲೂಕು ವ್ಯಾಪ್ತಿಯಲ್ಲಿನ ನದಿ ದಂಡೆಯೆಲ್ಲವೂ ನಾಶವಾಗಿ ಹೋಯಿತು. ಇಷ್ಟೆಲ್ಲಾ ಆದರೂ ಸಂಬಂಧಿಸಿದ ನೀರಾವರಿ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಇದನ್ನು ತಡೆಯಲು ಮುಂದಾಗಲಿಲ್ಲ.
ಇದೆಲ್ಲದರ ನಕಾರಾತ್ಮಕ ಪರಿಣಾಮ ಈ ಅಣೆಕಟ್ಟೆಯ ಮೇಲೆ ಬಿತ್ತು. ಈ ನೂತನ ಯೋಜನೆಯು ಸಾಕಾರಗೊಂಡಲ್ಲಿ ಈ ಪ್ರದೇಶವು ಜಿಲ್ಲೆಯಲ್ಲಿಯೇ ಒಂದು ಉತ್ತಮ ಪ್ರೇಕ್ಷಣೀಯ ಸ್ಥಳವಾಗಿ ರೂಪುಗೊಳ್ಳುವುದರಲ್ಲಿ ಅನುಮಾನವಿಲ್ಲ.
ನಾಲೆಯ ಪ್ರಾಮುಖ್ಯತೆ
ಶ್ರೀರಾಮದೇವರ ಅಣೆಕಟ್ಟೆಯು ತಾಲೂಕಷ್ಟೇ ಅಲ್ಲದೇ ಅಕ್ಕಪಕ್ಕದ ತಾಲೂಕುಗಳ ಕೃಷಿಗೆ ಸಾಕಷ್ಟು ನೀರು ಒದಗಿಸುವ ಜೀವನಾಡಿಯೆನಿಸಿದೆ. ಅಣೆಕಟ್ಟೆಯ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ನಾಲೆಗಳಿದ್ದು, ನಾಲೆಯ ಮುಖಾಂತರವಾಗಿ 600 ಕ್ಯೂಸೆಕ್ಸ್ ನೀರು ಬಳಸಿ ಒಟ್ಟು 4722 ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ನೀರಾವರಿ ಸೌಲಭ್ಯ: ಶ್ರೀರಾಮದೇವರ ಉತ್ತರ ನಾಲೆಯು 109 ಕಿ.ಮೀ ಉದ್ದವಿದ್ದು, ಇದರಿಂದ ಹರಿಯುವ 490 ಕ್ಯೂಸೆಕ್ಸ್ ನೀರು ಹೊಳೆನರಸೀಪುರ, ಚನ್ನರಾಯಪಟ್ಟಣ ಅಷ್ಟೇ ಅಲ್ಲದೇ ಕೆ.ಆರ್.ಪೇಟೆ ತಾಲೂಕಿನ ಒಟ್ಟು 3830 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುತ್ತದೆ.
ಅಣೆಕಟ್ಟೆಯ ದಕ್ಷಿಣ ನಾಲೆಯು 44ಕಿ.ಮೀ ಉದ್ದವಿದ್ದು, ಪ್ರಾರಂಭದಲ್ಲಿ ಹರಿಯುವ ನೀರಿನ ಪ್ರಮಾಣ 110ಕ್ಯೂಸೆಕ್‌ಗಳಿದ್ದು, ಹೊಳೆನರಸೀಪುರ ತಾಲೂಕಿನ ಒಟ್ಟು 892 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದೆ.

 ಎಚ್.ಡಿ. ಗುರುಪ್ರಸಾದ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement