ಮಳೆಯಿಂದ ಜನಜೀವನ ಅಸ್ತವ್ಯಸ್ತ
ಅರಸೀಕೆರೆ: ಬಿಸಿಲಿನ ಝಳದಿಂದ ತತ್ತರಿಸಿದ್ದ ಪಟ್ಟಣದ ಜನತೆಗೆ ಶನಿವಾರ ಸಂಜೆ ಸುರಿದ ಮಳೆ ಕೊಂಚ ತಂಪನ್ನೆರೆಯಿತು.
ಸುಮಾರು 5.30 ವೇಳೆಗೆ ಆರಂಭಗೊಂಡ ಮಿಂಚು, ಗುಡುಗು, ಬಿರುಗಾಳಿ ಸಹಿತ ಸುರಿದ ಮಳೆ ಸಂಚಾರವನ್ನು ಕೆಲಕಾಲ ಅಸ್ತವ್ಯಸ್ತಗೊಳಿಸಿದರೆ ಪಟ್ಟಣದ ವಿವಿದೆಡೆ ಹಾಕಲಾಗಿದ್ದ ಬೃಹದಾಕಾರದ ಫ್ಲೆಕ್ಸ್ಗಳು ಹರಿದು ಚೆಲ್ಲಾಪಿಲ್ಲಿಯಾದವು. ಅಲ್ಲದೇ, ವಿದ್ಯುತ್ ತಂತಿಗಳು ಒಂದಕ್ಕೊಂದು ತಗುಲಿಕೊಂಡಿದ್ದ ದೃಶ್ಯ ಕಂಡು ಬಂದಿತು.
ಅವ್ಯವಸ್ಥೆ ಆಗರ: ರೇಲ್ವೆ ನಿಲ್ದಾಣ ರಸ್ತೆ ಮಳೆಯ ರಭಸಕ್ಕೆ ಕೆರೆಯೋಪಾದಿಯಲ್ಲಿ ಕಂಡುಬಂದಿತು. ಪ್ರಯಾಣಿಕರು, ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಕಿರಿಕಿರಿ ಅನುಭವಿಸುವಂತಾಯಿತು. ಪುರಸಭೆ ನಿರ್ಮಿಸಿರುವ ಅವೈಜ್ಞಾನಿಕ ಒಳಚರಂಡಿ ವ್ಯವಸ್ಥೆ ಇಂತಹ ಎಲ್ಲಾ ಅಧ್ವಾನಗಳಿಗೆ ಕಾರಣವಾಗಿದೆ ಎಂದು ವ್ಯವಸ್ಥೆ ವಿರುದ್ಧ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಕಂಡು ಬಂದಿತು.
ಕಚೇರಿ ಮೇಲುರುಳಿದ ಮರ: ಪಶು ಆಸ್ಪತ್ರೆ ಕಾಂಪೌಂಡ್ಗೆ ಹೊಂದಿಕೊಂಡಂತಿದ್ದ ಬೃಹತ್ ಮರವೊಂದು ಕೃಷಿ ಇಲಾಖೆ ಕಚೇರಿ ಮೇಲೆ ಉರುಳಿ ಬಿದ್ದ ಪರಿಣಾಮ ಆಸ್ಪತ್ರೆಯ ತಡೆಗೋಡೆ ಹಾಗೂ ಕೃಷಿ ಇಲಾಖೆ ಕಚೇರಿಯ ನೂರಾರು ಹೆಂಚುಗಳು ಜಖಂಗೊಂಡಿವೆ. ಕಚೇರಿಯ ಆವರಣದಲ್ಲಿ ನಿಲುಗಡೆ ಮಾಡಲಾಗಿದ್ದ ಸಿಬ್ಬಂದಿಯ ಎರಡು ದ್ವಿಚಕ್ರ ವಾಹನಗಳು ಜಖಂಗೊಂಡ ಘಟನೆ ನಡೆದಿದೆ.