ವೈಭವದ ವೀರಭದ್ರಸ್ವಾಮಿ ರಥೋತ್ಸವ
ಅರಸೀಕೆರೆ: ತಾಲೂಕಿನ ಕಣಕಟ್ಟೆ ಗ್ರಾಮದ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿಯವರ ರಥೋತ್ಸವ ಸಾವಿರಾರು ಭಕ್ತರ ಸಮ್ಮಖದಲ್ಲಿ ಸಡಗರ ಸಂಭ್ರಮದಿಂದ ನೆರವೇರಿತು.
ರಥೋತ್ಸವದ ಅಂಗವಾಗಿ ಶ್ರೀ ವೀರಭದ್ರಸ್ವಾಮಿಯವರಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದ ನಂತರ ಶ್ರೀ ಮೂರುಕಣ್ಣು ಮಾರಮ್ಮನವರ ನೇತೃತ್ವದಲ್ಲಿ ರಥಕ್ಕೆ ಪುಣ್ಯಾಹ, ತೆಂಗಿನ ಕಾಯಿ ಒಡೆದು ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರ ಸ್ವಾಮಿಯನ್ನು ರಥದ ಮೇಲೆ ಕುಳ್ಳಿರಿಸಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥವಾಹನವನ್ನು ಎಳೆದು ಶ್ರೀಯವರ ಕೃಪೆಗೆ ಪಾತ್ರರಾದರು.
ನಂತರ ದೇವರಿಗೆ ಎತ್ತಿನಗಾಡಿ ಮತ್ತು ಟ್ರಾಕ್ಟರ್‌ಗಳಲ್ಲಿ ಪಾನಕ ಮಾಡಿ, 3 ಬಾರಿ ಪ್ರದಕ್ಷಣೆ ಹಾಕಿ ನೆರೆದಂತ ಜನರಿಗೆ ಬಾಯಾರಿಕೆ ದಣಿವನ್ನು ಹೋಗಲಾಡಿಸಿದರು. ನಂತರ ದೇವಸ್ಥಾನದ ಸಂಚಾಲಕ ಕೆ.ಎ. ನಾಗೇಶ್ ರಾವ್ ಅವರು, ಶ್ರೀ ಮೂರುಕಣ್ಣು ಮಾರಮ್ಮನವರನ್ನು ಪಾಕಶಾಲೆಗೆ ಕರೆದುಕೊಂಡು ಹೋಗಿ ಅನ್ನಪೂರ್ಣೇಶ್ವರಿ ಅವರಿಗೆ ಪೂಜೆ ಮಾಡಿ ಅನ್ನ ಸಂತರ್ಪಣೆಗೆ ಚಾಲನೆ ಕೊಟ್ಟರು.
ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಈ ಉತ್ಸವ ವೀಕ್ಷಿಸಿ ಶ್ರೀಗಳ ಪ್ರಸಾದ ಸ್ವೀಕರಿಸಿದರು. ಇದಕ್ಕೂ ಮೊದಲು, ಮೂಲ ವಿಗ್ರಹಕ್ಕೆ ಬೆಂಗಳೂರಿನಿಂದ ಆಗಮಿಸಿದ್ದ ವೇದಬ್ರಹ್ಮ ದಿವಂಗತ ಸುಬ್ರಮಣ್ಯ ಅವರ ಶಿಶ್ಯ ವೃಂದದಿಂದ ಸ್ವಾಮಿಗೆ ರುದ್ರಾಭಿಷೇಕ, ಅಷ್ಟೋತ್ತರ, ಅಷ್ಟಾವಧಾನ ಸೇವೆ ನೆರವೇರಿತು.