ಸುದ್ದಿ ಸಂಕ್ಷೇಪ
'ವಿದ್ಯಾರ್ಥಿಗಳು ಸಮತೋಲನ ಸಾಧಿಸಬೇಕು'
ಚನ್ನರಾಯಪಟ್ಟಣ: ಉನ್ನತ ಶಿಕ್ಷಣದಲ್ಲಿ ಪಠ್ಯ ವಿಷಯದಷ್ಟೇ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ದೈಹಿಕ ಮತ್ತು ಮಾನಸಿಕ ಶಕ್ತಿಯ ಸಮತೋಲನವನ್ನು ಸಾಧಿಸಬೇಕೆಂದು ಎಂದು ವಿದ್ಯಾರ್ಥಿಗಳಿಗೆ ಡಾ. ಎ.ಬಿ. ಚಂದ್ರಶೇಖರ್ ಕರೆಕೊಟ್ಟರು.
ಇತ್ತೀಚೆಗೆ ಪಟ್ಟಣದ ಶ್ರೀ ಆದಿಚುಂಚನಗಿರಿ ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಎ. ವಿದ್ಯಾರ್ಥಿಗಳಿಗೆ ಪಠ್ಯೇತರ ಸ್ಪರ್ಧೆಗಳನ್ನು ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
ಪಠ್ಯೇತರ ಸರಣಿ ಕಾರ್ಯಕ್ರಮವು ಶ್ರೀ ಆದಿಚುಂಚನಗಿರಿ ಶಿಕ್ಷಣ ಕಾಲೇಜಿನ ಪ್ರಾಧ್ಯಾಪಕ ಡಾ. ಎ.ಬಿ. ಚಂದ್ರಶೇಖರ್ ಅವರಿಂದ ಕ್ವಿಜ್ ಪ್ರಶ್ನಾವಳಿಗಳ ವಿತರಣೆ ಮುಖೇನ ವಿದ್ಯುಕ್ತವಾಗಿ ಚಾಲನೆಗೊಂಡಿತು.
ರಸಪ್ರಶ್ನೆ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಹಾಗೂ ವೇಗದ ಓಟದ ಸ್ಪರ್ಧೆಗಳನ್ನು ಎಂ.ಎ. ವಿದ್ಯಾರ್ಥಿಗಳಿಗೆ ನಡೆಸುತ್ತಿದ್ದು, ಸಾಂಸ್ಕೃತಿಕ ಹಾಗೂ ಕ್ರೀಡಾಹಬ್ಬದ ಸಮಾರೋಪ ಸಮಾರಂಭವು ಮೇ 9ರಂದು ಹಾಸನ ಶಾಖಾ ಮಠಾಧೀಶ ಶ್ರೀ ಶಂಭುನಾಥ ಸ್ವಾಮೀಜಿಯವರ ಸಾನಿಧ್ಯದಲ್ಲಿ ಜರುಗಲಿದೆ ಎಂದು ಸ್ನಾತಕೋತ್ತರ ಕೇಂದ್ರದ ಸಂಯೋಜಕ ಡಾ. ಎಚ್.ಎಸ್. ರವೀಂದ್ರ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ. ಚಂದ್ರು ಕಾಳೇನಹಳ್ಳಿ, ಎಂ.ಕೆ. ಮಂಜು, ಆರ್.ಕೆ. ಶಿವಪ್ಪ ಮತ್ತು ರೇವತಿ ಇದ್ದರು.
ಅಕ್ರಮ ಮದ್ಯ ಮಹಿಳೆ ಬಂಧನ
ಬೇಲೂರು: ತಾಲೂಕಿಗನ ಬಂಟೇನಹಳ್ಳಿ ಸಮೀಪದ ದೇವರಾಜಪುರದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬೇಲೂರು ಪೊಲೀಸರು ದಾಳಿ ನಡೆಸಿ ಓರ್ವ ಮಹಿಳೆಯನ್ನು ಬಂಧಿಸಿರುವ ಘಟನೆ ಇತ್ತೀಚೆಗೆ ನಡೆದಿದೆ. ದೇವರಾಜಪುರದ ನಿವಾಸಿ ತುಂಗಮ್ಮ ಎಂಬ ಮಹಿಳೆ ಅಕ್ರಮವಾಗಿ ಎಂಟುವರೆ ಲೀಟರ್ ಮದ್ಯ ಮಾರಾಟ ಮಾಡುತ್ತಿದ್ದಾಗ ಮಾಲು ಸಮೇತ ಸಿಕ್ಕಿಬಿದ್ದಿದ್ದು, ಅವರನ್ನು ಬೇಲೂರು ಪೊಲೀಸರು ಬಂಧಿಸಿ, ಪ್ರಕರಣ ದಾಖಲು ಮಾಡಿದ್ದಾರೆ.
ರಕ್ತದಾನ ಶಿಬಿರ
ಮೈಸೂರು: ಬಹುಜನ ವಿದ್ಯಾರ್ಥಿ ವೇದಿಕೆಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ 123ನೇ ಜನ್ಮದಿನಾಚರಣೆ
ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ 123 ಮಂದಿ ರಕ್ತದಾನ ಮಾಡಿದರು. ಭಾನುವಾರ ಮಾನಸಗಂಗೋತ್ರಿಯ ಇಎಂಎಂಆರ್‌ಸಿ ಸಭಾಂಗಣದಲ್ಲಿ ನಡೆದ ರಕ್ತದಾನ ಶಿಬಿರವನ್ನು ಬಿಎಸ್ಪಿ ರಾಜ್ಯ ಸಂಚಾಲಕ ಎನ್.ಮಹೇಶ್ ಉದ್ಘಾಟಿಸಿದರು.