ಪೇಟೆಬಾಣಾವರದಲ್ಲಿ ಇಂದು ಮರು ಮತದಾನ
ಹಾಸನ: ಮತಯಂತ್ರ ಕೈ ಕೊಟ್ಟ ಕಾರಣ ಸಮರ್ಪಕವಾಗಿ ಮತದಾನ ನಡೆಯದಿದ್ದ ಅರಸೀಕೆರೆ ತಾಲೂಕು ಪೇಟೆ ಬಾಣಾವರ ಮತಗಟ್ಟೆಯ (ಸಂಖ್ಯೆ -72) ಮರುಮತದಾನ ಏ. 29 ರಂದು ನಡೆಯಲಿದೆ.
ಏ. 17ರಂದು ನಡೆದ ಮತದಾನದಂದು ಒಬ್ಬ ವ್ಯಕ್ತಿ ಮತದಾನ ಮಾಡಿದ ನಂತರ ಮತ್ತೊಬ್ಬರಿಗೆ ಮತದಾನ ಮಾಡಲು ಅವಕಾಶ ನೀಡುವ ಕಂಟ್ರೋಲ್ ಯುನಿಟ್ ಯಂತ್ರ ಸರಿಯಾಗಿ ಕಾರ್ಯ ನಿರ್ವಹಿಸದೇ ಮತದಾನಕ್ಕೆ ಅಡಚಣೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಏ. 29 ರಂದು ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ. ಈ ಮತಗಟ್ಟೆಯಲ್ಲಿ 535 ಮತದಾರರು ಇದ್ದು, ಪುರುಷರು 272 ಮತ್ತು ಮಹಿಳೆ ಮತದಾರರು 263 ಇದ್ದಾರೆ.