ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಿ

Mainashree
Updated On : 29 Apr 2014, 12:14 pm

ಕ.ಪ್ರ. ವಾರ್ತೆ ಟಿ ಹಾಸನ ಟಿ ಏ. 28 : ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡರೆ ಯಾವುದೇ ವೃತ್ತಿಯಲ್ಲಿದ್ದರೂ ಸಮಾಜಕ್ಕೆ ಕೊಡುಗೆ ನೀಡಬಹುದು, ಬದುಕಿನಲ್ಲಿ ಯಶಸ್ಸು ಕಾಣಬಹುದು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಶಾಖಾ ಮಠದ ಪೀಠಾಧಿಪತಿ ಶ್ರೀ ಶಂಭುನಾಥ ಸ್ವಾಮೀಜಿ ಕಿವಿಮಾತು ಹೇಳಿದರು.
ಭಾನುವಾರ ನಗರದ ಶ್ರೀ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿರುವ ಬಿ.ಜಿ.ಎಸ್. ಸ್ಟಡಿ ಸೆಂಟರ್ ಸಭಾಂಗಣದಲ್ಲಿ ಬಿಜಿಎಸ್ ಸ್ಟಡಿ ಸೆಂಟರ್ ವತಿಯಿಂದ ನಡೆದ ದ್ವಿತೀಯ ಪಿ.ಯು.ಸಿ, ಸಿ.ಇ.ಟಿ. ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಲಹೆ: ವಿದ್ಯಾರ್ಥಿಗಳು ಕನಸು ಕಾಣಬೇಕು. ಅದನ್ನು ಸಾಕಾರಗೊಳಿಸಿಕೊಳ್ಳಲು ಗುರುಗಳ ಮಾರ್ಗದರ್ಶನದಂತೆ ಅವಿರತ ಪ್ರಯತ್ನ ನಡೆಸಬೇಕು. ಗುರಿಸಾಧನೆಗೆ ಶಿಸ್ತು ಬಹಳ ಮುಖ್ಯ. ಆಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಹುಡುಗಾಟಿಕೆಯ ನಡವಳಿಕೆ ಬಿಟ್ಟು ಜ್ಞಾನದ ಹುಡುಕಾಟ ಆರಂಭಿಸಬೇಕು. ಕಲಿಯುವಿಕೆ ನಿರಂತರವಾಗಿರಬೇಕು ಎಂದು ಸಲಹೆ ಮಾಡಿದರು.
ಶ್ರಮ ಸಾರ್ಥಕ: ಗ್ರಾಮೀಣ ಪ್ರದೇಶಗಳ ಬಡ ವಿದ್ಯಾರ್ಥಿಗಳೂ ವೃತ್ತಿ ಶಿಕ್ಷಣದ ಅವಕಾಶ ಪಡೆಯಲಿ ಎಂಬ ಸದುದ್ದೇಶದಿಂದ ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಈ ತರಬೇತಿ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆದರೆ ಮಠದ ಶ್ರಮ ಸಾರ್ಥಕ ಎಂದರು.
ಕೀಳರಿಮೆ ಬಿಡಬೇಕು: ಸಮಾರೋಪ ಭಾಷಣ ಮಾಡಿದ ಚಿಕ್ಕಮಗಳೂರು ಶ್ರೀ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸಿ.ಕೆ. ಸುಬ್ಬರಾಯ ಅವರು, ವಿದ್ಯಾರ್ಥಿಗಳು ಆತ್ಮವಿಶ್ವಾಸ ಮತ್ತು ಧೈರ್ಯ ಬೆಳೆಸಿಕೊಳ್ಳಬೇಕು. ಕೀಳರಿಮೆ ಬಿಡಬೇಕು. ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಹಣಕಾಸಿನ ತೊಂದರೆಯ ನೆಪವೊಡ್ಡಿ ವಿದ್ಯಾಭ್ಯಾಸ ನಿಲ್ಲಿಸಬಾರದು ಎಂದು ತಿಳಿಸಿದರು.
ಶಿಲ್ಪಿಗಳು ನೀವೇ: ಅಧ್ಯಕ್ಷತೆ ವಹಿಸಿದ್ದ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಎಚ್.ಎಲ್. ನಾಗರಾಜು ಮಾತನಾಡಿ, ನಿಮ್ಮ ಜೀವನದ ಶಿಲ್ಪಿಗಳು ನೀವೇ ಎಂಬುದನ್ನು ಅರಿತು ಜವಾಬ್ದಾರಿಯಿಂದ ವಿದ್ಯಾಭ್ಯಾಸ ಮಾಡಿದರೆ ಅಂದುಕೊಂಡ ಗುರಿ ಸಾಧಿಸಬಹುದು. ಕರ್ನಾಟಕದ ವೈದ್ಯಕೀಯ ಕಾಲೇಜುಗಳಲ್ಲಿ ನೆರೆರಾಜ್ಯದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ನಮ್ಮ ಗ್ರಾಮೀಣ ಪ್ರದೇಶದ ವಿದ್ಯಾರ್ಥ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯ ಶಿಕ್ಷಣ ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಬಿಜಿಎಸ್ ಸ್ಟಡಿ ಸೆಂಟರ್‌ನ ಸಂಯೋಜಕರೂ ಆದ ಎವಿಕೆ ಮಹಿಳಾ ಕಾಲೇಜು ಪ್ರಾಧ್ಯಾಪಕ ಡಾ. ಎಚ್.ಕೆ. ಕುಶಾಲಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು.  ಉಪನ್ಯಾಸಕಿ ಶೋಭಾ, ಶಿಬಿರಾರ್ಥಿಗಳ ಪರವಾಗಿ ಕಾರ್ತಿಕ್, ತೇಜಸ್ವಿನಿ, ಮಧು ಎಂ.ವಿ. ಮತ್ತು ಪಂಚಮಿ ಹೆಚ್.ಆರ್. ಹಾಗೂ ಪೋಷಕರ ಪರವಾಗಿ ಡಾ. ಸುರೇಶ್ ಕುಮಾರ್ ಮಾತನಾಡಿದರು. ಬಿಜಿಎಸ್ ಸ್ಟಡಿ ಸೆಂಟರ್‌ನ ಮಂಜು ಇದ್ದರು. ಪ್ರಾಂಶುಪಾಲ ಚಂದ್ರಶೇಖರ್ ನಿರೂಪಿಸಿದರು. ಶ್ರೀ ಆದಿಚುಂಚನಗಿರಿ ಹಾಸನ ಶಾಖಾ ಮಠದ ವ್ಯವಸ್ಥಾಪಕ ಎಚ್.ಕೆ. ಚಂದ್ರಶೇಖರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement