ಸಂಭ್ರಮದ ಮಿಡಚಲಮ್ಮನ ಹಬ್ಬ
ಹೊಳೆನರಸೀಪುರ: ಗ್ರಾಮದಲ್ಲಿನ ಜನ- ಜಾನುವರುಗಳಿಗೆ ರೋಗ ರುಜಿನಗಳು ಬಾರದಂತೆ ಕಾಯುವ ದೇವರು ಎಂಬುದಾಗಿ ನಂಬಿರುವ ಗ್ರಾಮದೇವತೆ ಮಿಡಚಲಮ್ಮನವರ ಹಬ್ಬವನ್ನು ತಾಲೂಕಿನ ನಾಗಲಾಪುರ ಗ್ರಾಮಸ್ಥರು ಭಾನುವಾರದಂದು ಶ್ರದ್ಧಾ-ಭಕ್ತಿಯಿಂದ ಸಂಭ್ರಮದ ನಡುವೆ ಆಚರಿಸಿದರು.
ಗ್ರಾಮ ದೇವತೆ ಮಿಡಚಲಮ್ಮನ ಹಬ್ಬವನ್ನು ಆಚರಿಸುವ ಕುರಿತಂತೆ ನಾಗಲಾಪುರದ ಗ್ರಾಮಸ್ಥರುಗಳು ಪ್ರತೀ ಯುಗಾದಿಯಂದು ಎಲ್ಲರೂ ಒಟ್ಟಿಗೆ ಸಭೆ ಸೇರಿ ಹಬ್ಬದ ಖರ್ಚು- ವೆಚ್ಚಗಳನ್ನು ಗ್ರಾಮದಲ್ಲಿನ ಎಲ್ಲರೂ ಸಮನಾಗಿ ಹಂಚಿಕೊಂಡು ಈ ಹಬ್ಬವನ್ನು ಸಡಗರ- ಸಂಭ್ರಮದಿಂದ ಆಚರಿಸುತ್ತಾರೆ. ಹಿಂದೆ ಈ ಭಾಗದ ಜನರು ಮಲೆನಾಡು ಪ್ರಾಂತ್ಯಕ್ಕೆ ವ್ಯಾಪಾರಕ್ಕೆಂದು ಹೋದ ಸಂದರ್ಭದಲ್ಲಿ ಇಲ್ಲಿನವರ ಜೊತೆಗೇ ಬೆನ್ನತ್ತಿ ಬಂದು ಗ್ರಾಮದಲ್ಲಿ ನೆಲೆಸಿದ ಪ್ರತೀತಿ ಹೊಂದಿದೆ ಎನ್ನಲಾದ ಮಿಡಚಲಮ್ಮನವರ ಹಬ್ಬವನ್ನು ನಾಗಲಾಪುರದ ಗ್ರಾಮಸ್ಥರು ವಿಶೇಷ ಆಸಕ್ತಿ ಹಾಗೂ ಅದ್ಧೂರಿಯಾಗಿ ಆಚರಿಸುತ್ತಾರೆ.
ನಿಯಮದ ಪೂಜೆ: ಪ್ರತೀ ವರ್ಷವೂ ಪಟ್ಟಣದ ಕುಂಬಾರರ ಮನೆಯಲ್ಲಿ ಮಿಡಚಲಮ್ಮನವರ ಮಣ್ಣಿನ ವಿಗ್ರಹವನ್ನು ಮಾಡಿಸಿ, ಅಲ್ಲಿಂದಲೇ ಶ್ರದ್ಧಾ- ಭಕ್ತಿಯಿಂದ ಮೆರವಣಿಗೆಯಲ್ಲಿ ಕುಣಿಯುತ್ತಾ ದೇವಿಯನ್ನು ಹೊತ್ತು ತರುವ ಗ್ರಾಮಸ್ಥರು, ನಂತರ ಗ್ರಾಮದ ಬಳಿಯಲ್ಲಿನ ಕಾಲುವೆಯ ಬಳಿ ಪೂಜೆ ಸಲ್ಲಿಸಿ, ದೇವಿಗೆ ತಮ್ಮ ಹರಕೆಯ ಪ್ರತೀಕವಾಗಿ ಕುರಿಗಳನ್ನು ಬಲಿಯನ್ನಾಗಿ ನೀಡುತ್ತಾರೆ. ಈ ಎಲ್ಲಾ ಪೂಜೆಗಳನ್ನೂ ಇಲ್ಲಿ ಮಡಿವಾಳ ಜನಾಂಗದವರೇ ನಿರ್ವಹಿಸುತ್ತಾರೆ. ದೇವಿಗೆ ಪೂಜೆ ಸಲ್ಲಿಸುವ ಮಡಿವಾಳ ಜನಾಂಗದವರು ಮೊದಲು ಪೂಜಾ ಕಾರ್ಯಗಳು ಮುಗಿಯುವವರೆವಿಗೂ ವ್ರತಾಚರಣೆಯಂತೆ ಯಾವುದೇ ರೀತಿಯ ಆಹಾರವನ್ನೂ ಸೇವಿಸದೇ ಉಪವಾಸವಿದ್ದು ಪೂಜೆ ಸಲ್ಲಿಸುತ್ತಾರೆ.
ಭರ್ಜರಿ ಊಟ: ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಳೆಂದು ನಂಬಿರುವ ಮಿಡಚಲಮ್ಮ ದೇವಿಗೆ ಈಚಲು ಮರದ ಹೆಂಡ ಮತ್ತು ಕುರಿಯನ್ನು ಬಲಿ ನೀಡಿದ ನಂತರ ಗ್ರಾಮದಲ್ಲಿನ ಜನರು ತಮ್ಮ ಶಕ್ತ್ಯಾನುಸಾರವಾಗಿ ಹರಕೆ ತೀರಿಸಿ ತಮ್ಮ ಆಪ್ತೇಷ್ಟರಿಗೆ ಭರ್ಜರಿ ಊಟ ಹಾಕುತ್ತಾರೆ.
ವಿಶೇಷ ಹರಕೆ: ಈ ದೇವಿಯ ಮತ್ತೊಂದು ವಿಶೇಷವೆಂದರೆ ಪ್ರತೀ ವರ್ಷದ ಪೂಜೆಯ ಸಂದರ್ಭದಲ್ಲಿಯೂ ದೊಡ್ಡದಾದ ದೀಪವೊಂದನ್ನು ಇರಿಸಿ ಅದಕ್ಕೆ ಎಳನೀರನ್ನು ಹಾಕಿ ಪೂಜೆ ಸಲ್ಲಿಸುತ್ತಾರೆ. ಎಳನೀರಿನಲ್ಲಿ ಈ ರೀತಿಯಾಗಿ ಉರಿಯುವ ದೀಪವನ್ನು ಮದುವೆಯಾಗದವರು, ಮಕ್ಕಳಿಲ್ಲದವರು ತಮ್ಮ ಹರಕೆಯನ್ನು ತೀರಿಸುವ ಸಲುವಾಗಿ ದೇವಿಯ ಮುಂದಿರುವ ದೀಪಕ್ಕೆ ಎಳನೀರನ್ನು ತಂದು ಹೊಯ್ಯುತ್ತಾರೆ.
ಈ ರೀತಿಯಾಗಿ ಮಿಡಚಲಮ್ಮನವರ ಹಬ್ಬವನ್ನು ಗ್ರಾಮಸ್ಥರು ಶ್ರದ್ಧಾ- ಭಕ್ತಿಯೊಂದಿಗೆ ಆಚರಿಸಿದ ಸಂದರ್ಭದಲ್ಲಿ ಇಲ್ಲಿನ ಶಾಸಕ ಎಚ್.ಡಿ. ರೇವಣ್ಣನವರು ಗ್ರಾಮಕ್ಕೆ ಭೇಟಿ ನೀಡಿದ್ದರು. ಹಬ್ಬದ ಅಂಗವಾಗಿ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.