ಇಂದು ನುಡಿನಮನ, ವಿಚಾರ ಸಂಕಿರಣ
ಸಕಲೇಶಪುರ: ದಲಿತ ಚಳುವಳಿಗಾರ ಬಿ. ಕೃಷ್ಣಪ್ಪ ಅವರಿಗೆ ನುಡಿನಮನ ಕಾರ್ಯಕ್ರಮ ಮತ್ತು ವಿಚಾರ ಸಂಕಿರಣವನ್ನು ಏ. 30ರಂದು ಪಟ್ಟಣದ ಮಿರಸಾಗರ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಚ್.ಕೆ. ಜಗದೀಶ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 70ರ ದಶಕದಲ್ಲಿ ರಾಜ್ಯದಲ್ಲಿ ವಿದ್ಯಾವಂತರ ವಿಚಾರವಂತರನ್ನು ಒಗ್ಗೂಡಿಸಿ ದಲಿತ ಚಳುವಳಿ ನಡೆಸಿ ರಾಜ್ಯದೆಲ್ಲಡೆ ಕ್ರಾಂತಿ ಹುಟ್ಟಿಸಿದ ಮಹಾನ್ ಹೋರಾಟಗಾರ ಪ್ರೊ. ಬಿ. ಕೃಷ್ಣಪ್ಪ ಅವರನ್ನು ಕರ್ನಾಟಕದ ಅಂಬೇಡ್ಕರ್ ಎಂದೇ ಕರೆಯಲಾಗುತ್ತಿತ್ತು. ಅವರು ಕಂಡ ರಾಜಕೀಯ ಮೀಸಲಾತಿ ಅವಶ್ಯಕತೆಯ ಕುರಿತು ಇಂದಿಗೂ ದಲಿತರಲ್ಲಿ ಗೊಂದಲವಿದೆ. ಈ ಕುರಿತಾಗಿ ಕಾರ್ಯಕ್ರಮದಲ್ಲಿ ದಲಿತರಿಗೆ ರಾಜಕೀಯ ಮೀಸಲಾತಿ ಹಾಗೂ ಪ್ರಸ್ತುತ ದಲಿತರ ಪರಿಸ್ಥಿತಿ ಎಂಬ ವಿಷಯವಾಗಿ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಹಾಗೂ ಇದೇ ಕಾರ್ಯಕ್ರಮದಲ್ಲಿ ಡಿಎಸ್‌ಎಸ್ ರಾಜ್ಯ ಸಂಚಾಲಕ ಲಕ್ಷ್ಮೀ ನಾರಾಯಣ್ ನಾಗವಾರ ಸಂಪಾದಕತ್ವದ ಬಿ. ಬಸವಲಿಂಗಪ್ಪ ಮತ್ತು ಬೂಸಾ ಚಳುವಳಿ ಕಾಲು ಶತಮಾನ ಎಂಬ ಪುಸ್ತಕ ಬಿಡುಗಡೆಗೊಳಿಸಲಿದೆ ಎಂದರು.