ತಂತ್ರಜ್ಞಾನದಿಂದ ಭಾರತದ ಸ್ವಾವಲಂಬನೆ
ಅರಸೀಕೆರೆ: ಭಾರತದ ಸ್ವಾವಲಂಬನೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ, ಅದನ್ನೇ ಆಶ್ರಯಿಸುವಲ್ಲಿ ಮಾತ್ರ ಸಾಧ್ಯ. ಧಾರ್ಮಿಕ, ಆಧ್ಯಾತ್ಮಿಕ ಅಥವ ಭಾವನಾತ್ಮಕ ಚಟುವಟಿಕೆಗಳಿಂದ ಸಾಧ್ಯವಿಲ್ಲ ಎಂದು ಭಾರತ ಜ್ಞಾನ- ವಿಜ್ಞಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಅಹಮದ್ ಹೇಳಿದರು.
ಇತ್ತೀಚೆಗೆ ತಾಲ್ಲೂಕಿನಲ್ಲಿ ಭಾರತ ಜ್ಞಾನ- ವಿಜ್ಞಾನ ಸಮಿತಿಯ ಸದಸತ್ವ ಅಭಿಯಾನ ಆರಂಭಿಸಿ ಮಾತನಾಡಿದ ಅವರು, ಭಾರತಕ್ಕೆ ಸ್ವಾತಂತ್ರ ಬಂದು 60 ವರ್ಷ ಕಳೆದರೂ ಸ್ವಾವಲಂಬನೆ ಸಾಧ್ಯವಾಗದಿರುವುದು ಭಾರತ ವೈಜ್ಞಾನಿಕ ಸಾಧನೆಯಲ್ಲಿ ಹಿಂದುಳಿದಿರುವುದೇ ಕಾರಣ. ಆ ಕಾರಣ ಭಾರತ ಜಗತ್ತಿನ ಬಡ ದೇಶಗಳ ಸಾಲಿನಲ್ಲಿಯೇ ಇದೆ ಎಂದರು.
ಸಮಿತಿಯಿಂದ ಪ್ರಸಾರ: ಭಾರತದಲ್ಲಿ ವೈಜ್ಞಾನಿಕ ಮನೋಧರ್ಮದ ಚಿಂತನೆ, ಪ್ರಸಾರ ಹಾಗೂ ಅಳವಡಿಕೆ ಕ್ಷೀಣವಾಗಿದೆ ಹಾಗಾಗಿ ನಾವು ಸ್ವಾವವಲಂಬಿ ದೇಶವಾಗಿ ಭಾರತದ ಜನತೆ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ವೈಚಾರಿಕ ಚಿಂತನೆ ಹಾಗೂ ವೈಜ್ಞಾನಿಕ ಮನೋಧರ್ಮ ಬೆಳೆಸಿಕೊಳ್ಳಲೇ ಬೇಕಿದೆ. ಈ ನಿಟ್ಟಿನಲ್ಲಿ ದೇಶಾದ್ಯಾಂತ ಭಾರತ ಜ್ಞಾನ, ವಿಜ್ಞಾನ ಸಮಿತಿ ವಿಜ್ಞಾನ ಪ್ರಸಾರದಲ್ಲಿ ತೊಡಗಿದೆ ಎಂದರು.
ಹೆಚ್ಚು ಜನ ಪಾಲ್ಗೊಳ್ಳಬೇಕು: ಸದಸತ್ವ ಅಭಿಯಾನದಲ್ಲಿ ಭಾಗವಹಿಸಿದ್ದ ಬಿಜಿವಿಎಸ್ ಜಿಲ್ಲಾಧ್ಯಕ್ಷ ಎಚ್.ಟಿ. ಗುರುರಾಜು ಮಾತನಾಡಿ, ಅರಸೀಕೆರೆ ತಾಲೂಕು ಅಂತರ್ಜಲ ಮಟ್ಟ ಕಳೆದುಕೊಂಡು ಅಗತ್ಯ ಮೂಲಭೂತ ಸಮಸ್ಯೆಗಳಿಂದ ನರಳುತ್ತಿದೆ. ನೈರ್ಮಲ್ಯ, ಆರೋಗ್ಯ, ಅಂತರ್ಜಲ ಹಾಗೂ ಪರಿಸರ ಸಂಬಂಧಿತ ವಿಷಯಗಳಲ್ಲಿ ಜನತೆಯಲ್ಲಿ ಅರಿವು ಮೂಡಿಸುವ ಅಗತ್ಯ ಇದೆ. ಈ ಕೆಲಸವನ್ನು ಬಿಜಿವಿಎಸ್ ಅಗತ್ಯವಾಗಿ ಮಾಡಲೇ ಬೇಕಿದೆ. ಈ ಸಂಬಂಧ ಅರಸೀಕೆರೆಯಲ್ಲಿ ಹೆಚ್ಚೆಚ್ಚು ಜನರನ್ನು ಬಿಜಿವಿಎಸ್ ಜೊತೆ ಪಾಲ್ಗೊಳ್ಳಲು ಪ್ರೇರೇಪಿಸಬೇಕು ಎಂದರು.
ಕ್ರಿಯಾ ಯೋಜನೆ: ಶ್ರೀ ಚಂದ್ರಶೇಖರ ಭಾರತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿಶ್ವನಾಥ್ ಮಾತನಾಡಿ, ತಾಲ್ಲೂಕು ಶೈಕ್ಷಣಿಕ ಹಾಗೂ ವೈಜ್ಞಾನಿಕವಾಗಿ ಹಿಂದುಳಿದಿದೆ. ಶಾಲಾ ಮಕ್ಕಳಲ್ಲಿ ಸ್ವಾವಲಂಬನಾ ಅಭ್ಯಾಸ ಕಲಿಸುವುದು ತುರ್ತಿನ ಕೆಲಸವಾಗಬೇಕಿದೆ. ತಾಲ್ಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಹಾಗೂ ಪರಿಹಾರದ ಕುರಿತು ಚರ್ಚಿಸಬೇಕಾದ ಅಗತ್ಯ ಇದೆ. ಬಿಜಿವಿಎಸ್ ತಾಲೂಕು ಘಟಕ ಈ ಕುರಿತು ಮುಂದಿನ ದಿನಗಳಲ್ಲಿ ಕ್ರಿಯಾ ಯೋಜನೆ ರೂಪಿಸಲಿದೆ ಎಂದರು.
ವಿಚಾರ ಮಂಡನೆ: ಈ ಸಂಬಂಧ ಜೂನ್ 14 ಭಾರತ ಜ್ಞಾನ- ವಿಜ್ಞಾನ ಸಮಿತಿ ತಾಲೂಕು ಸಮಾವೇಶ ಮತ್ತು ಅಂತರ್ಜಲ ಕುಸಿತ ಕಾರಣ ಮತ್ತು ಪರಿಹಾರ ಕುರಿತ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುವುದು. ವಿಜ್ಞಾನ ಸಾಹಿತಿ ಮತ್ತು ಪರಿಸರವಾದಿ ಕೆ.ಎಸ್. ರವಿಕುಮಾರ್ ವಿಚಾರ ಮಂಡಿಸಲಿದ್ದಾರೆ ಎಂದುತಿಳಿಸಿದರು.
ಇದೇ ಸಂದರ್ಭದಲ್ಲಿ ಸಮಾವೇಶ ಹಾಗೂ ವಿಚಾರ ಸಂಕಿರಣದ ಸಂಚಾಲಕ ಸಮಿತಿ ರಚಿಸಲಾಯಿತು. ಕಣಕಟ್ಟೆ ಐ.ಟಿ.ಐ ಪ್ರಾಂಶುಪಾಲ ಚೇತನ್ ಸಂಚಾಲಕರಾಗಿ ಚಂದ್ರಶೇಖರಭಾರತಿ ಶಿಕ್ಷಣ ಸಂಸ್ಥೆಯ ಕ:ಕೇರಿ ಅಧೀಕ್ಷಕ ಅಶೋಕ್ ಹಾಗೂ ಉಪನ್ಯಾಸಕ ಸತೀಶ್ ನಾಡಿಗ್ ಸಹ ಸಂಚಾಲಕರಾಗಿ ಸಮಾಜ ಸೇವಕಿ ಮಮತರಾಣಿ, ಶಿಕ್ಷಕಿ ಮಮತ, ಮಾನವ ಹಕ್ಕುಗಳ ಕಾರ್ಯಕರ್ತೆ ಇಂಧುಮತಿ, ಶಿಕ್ಷಣ ತಜ್ಞ ವಿಶ್ವನಾಥ್, ಶಿಕ್ಷಕರಾದ ರಂಗನಾಥ್, ಪ್ರಶಾಂತ್, ಕುಮಾರಸ್ವಾಮಿ, ಮನ್ಸೂರ್, ಸವಿತ ಹಾಗೂ ಕ.ಸಾ.ಪ ಸದಸ್ಯ ಪರಮೇಶ ಸಂಚಾಲಕ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಯಿತು.