ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನೀರು ಕೊಡಿ ಸಾರ್... ನೀರು

Mainashree
Updated On : 29 Apr 2014, 9:20 am

ಕ.ಪ್ರ.ವಾರ್ತೆ  ಹಾಸನ  ಏ. 29
ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ತಾಲೂಕಿನ ದುದ್ದ ಹೋಬಳಿಯ ಜಿ. ಮೈಲನಹಳ್ಳಿ ಗ್ರಾಮಸ್ಥರು ಮಂಗಳವಾರ ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಸಮಯ ಧರಣಿ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್‌ಗೆ ಮನವಿ ನೀಡಿದರು.
ತಾಲೂಕಿನ ದುದ್ದ ಹೋಬಳಿಯ ಮೆಳಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿರುವ ಜಿ.ಮೈಲನಹಳ್ಳಿ ಗ್ರಾಮದಲ್ಲಿ ಓವರ್ ಹೆಡ್ ಟ್ಯಾಂಕ್ ಸೌಲಭ್ಯ ಹೊಂದಿ ನೀರಿನ ಸೌಕರ್ಯ ಮಾಡಿಕೊಟ್ಟಿದ್ದಾರೆ. ಆದರೆ, ಕಳೆದೊಂದು ತಿಂಗಳಿಂದ ಕುಡಿಯುವ ನೀರಿಲ್ಲದೆ ಬಹಳ ತೊಂದರೆ ಅನುಭವಿಸಲಾಗುತ್ತಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು, ನೀರಿಗೆ ಹಾಹಾಕಾರ ಪಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರೋಪ: ಕಳೆದ ಒಂದು ತಿಂಗಳಿನಿಂದಲೂ ಗ್ರಾಮದಲ್ಲಿ ಕುಡಿಯುವ ನೀರಿಗೆ ಪದೇ ಪದೇ ತೊಂದರೆಯಾಗುತ್ತಿದ್ದರೂ, ಈ ಬಗ್ಗೆ ಗ್ರಾಮ ಪಂಚಾಯ್ತಿಗೆ ಗ್ರಾಮಸ್ಥರಿಗೆ ಸಾಕಷ್ಟು ಬಾರಿ ದೂರು ನೀಡಲಾಗುತ್ತಿದೆ. ಆದರೆ, ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಕುಡಿಯುವ ನೀರಿನ ಸರಬರಾಜಿಗೆ ಸಾಕಷ್ಟು ಅನುದಾನ ಬರುತ್ತಿದ್ದು, ಕಾಲಕಾಲಕ್ಕೆ ಬರುವ ಎಲ್ಲಾ ಅನುದಾನಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ ಎಂದು ಆರೋಪಿಸಿದರು.
ದೂರು: ಕುಡಿಯುವ ನೀರಿನ ಅಸಮರ್ಪಕ ವಿತರಣೆಯ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯ್ತಿಯಲ್ಲಿ ಗ್ರಾಮಸ್ಥರು ವಿಚಾರಿಸಿದರೆ, ಗ್ರಾಮ ಪಂಚಾಯ್ತಿಯವರು ಜಿಲ್ಲಾ ಪಂಚಾಯ್ತಿಗೆ ಪತ್ರದ ಮುಖೇನ ಕೇಳುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಈವರೆಗೆ ನೀರಿನ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಜೊತೆಗೆ ಅನಿಯಮಿತ ವಿದ್ಯುತ್ ಕಡಿತದಿಂದ ಪಂಪ್‌ಹೌಸ್‌ನಲ್ಲಿ ನೀರನ್ನು ಪಂಪ್ ಮಾಡಿ ಸರಬರಾಜು ಮಾಡಲು ಆಗುತ್ತಿಲ್ಲ ಎಂದು ದೂರಿದರು.
ಬೆಳೆಗಳಿಗೆ ನೀರಿಲ್ಲ: ಈಗಾಗಲೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದ್ದು, ಹಣ ಇದ್ದರೂ ಸಮಸ್ಯೆ ಪರಿಹರಿಸಲು ಸಾಧ್ಯವಾಗದೇ ಸಂಬಂಧಪಟ್ಟ ಇಲಾಖೆಗಳು ಕೈಕಟ್ಟಿ ಕುಳಿತಿವೆ. ನೀರಿನ ಮೂಲ ಹೆಚ್ಚಿಸಲು ಜಿಲ್ಲಾಡಳಿತ ಮುಂದಾಗಬೇಕು. ನಳ ನೀರು ಸರಬರಾಜೂ ಕೂಡ ಸಮರ್ಪಕವಾಗಿಲ್ಲ. ಗ್ರಾಮದ ಜನ ಜಾನುರಾಗಳಿಗೆ ಜಲ ಮೂಲ ಇಲ್ಲದಂತಾಗಿದೆ. ಆದರೆ, ಬಹುತೇಕ ಕೆರೆಗಳ ಒಡಲು ಸಂಪೂರ್ಣ ಬತ್ತಿ ಹೋಗಿದೆ. ಹೀಗಾಗಿ ಜನ- ಜಾನುವಾರು ನೀರಿಗಾಗಿ ಪರದಾಡುವಂತಾಗಿದೆ. ಕೆರೆ ಅಚ್ಚುಕಟ್ಟು ಪ್ರದೇಶದ ಬೆಳೆಗಳು ನೀರಿಲ್ಲದೆ ಒಣಗಿವೆ ಎಂದರು.
ಟ್ಯಾಂಕರ್ ನೀರು ಬೇಕೇಬೇಕು: ಜಲ ಮೂಲ ಬತ್ತಿ ಹೋಗಿರುವುದರಿಂದ ಗ್ರಾಮದಲ್ಲಿ ಇರುವಂತಹ ಬೋರ್‌ವೆಲ್‌ನಲ್ಲಿ ನೀರು ಲಭ್ಯವಾಗುತ್ತಿಲ್ಲ. ಇರುವಂತಹ ಓವರ್ ಹೆಡ್ ಟ್ಯಾಂಕ್ ಸಹ ಹಾಳಾಗಿರುವುದರಿಂದ ನೀರಿನ ಸಂಗ್ರಹಣೆ ಸಾಧ್ಯವಾಗಿದೆ. ಕುಡಿಯುವ ನೀರನ್ನು ಪಂಚಾಯ್ತಿಯಿಂದ ಟ್ಯಾಂಕರ್ ಮೂಲಕ ಒದಗಿಸುತ್ತಿದ್ದರೂ ಅದು ಸಾಕಾಗುತ್ತಿಲ್ಲ. ಆದ್ದರಿಂದ ಹೆಚ್ಚಿನ ಟ್ಯಾಂಕರ್‌ಗಳ ಮೂಲಕ ಗ್ರಾಮಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸುವ ಅನಿವಾರ್ಯತೆ ಇದೆ. ಅಲ್ಲದೇ, ಬೋರ್‌ವೆಲ್ ವ್ಯವಸ್ಥೆ ಮಾಡಿ, ಹಾಳಾಗಿರುವ ಟ್ಯಾಂಕ್ ಸರಿಪಡಿಸಬೇಕು ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಅವರನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಂಜುನಾಥ್, ಮಂಜಪ್ಪ, ಶಿವರಾಜು, ರಂಗೇಗೌಡ, ತಿಮ್ಮೇಗೌಡ, ಗೌರಮ್ಮ, ಯಶೋದಮ್ಮ, ವಿನೋದ, ಮಂಜಮ್ಮ, ಸುಂದ್ರಮ್ಮ, ಮಂಜುಳ, ಸುಜಾತ, ಮಂಗಳಮ್ಮ, ಸವಿತ, ಸರೋಜಮ್ಮ, ಸಾವಿತ್ರಮ್ಮ, ಪುಟ್ಟಪ್ಪ ಹಾಗೂ ಇತರರು ಇದ್ದರು.
ಜಿಲ್ಲಾಧಿಕಾರಿ ಭರವಸೆ
ಗ್ರಾಮಸ್ಥರ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ಗ್ರಾಮದಲ್ಲಿನ ಸಮಸ್ಯೆಯನ್ನು ಜಿಲ್ಲಾಡಳಿತದ ಗಮನಕ್ಕೆ ತರಲು ಇಷ್ಟು ಜನ ಬಂದು ಪ್ರತಿಭಟಿಸುವ ಅಗತ್ಯವಿರಲಿಲ್ಲ. ಯಾರೇ ಒಬ್ಬರು ಬಂದು ತಿಳಿಸಿದರೂ ಸಾಕಿತ್ತು. ಗ್ರಾಮದಲ್ಲಿ ಉದ್ಭವಿಸುವಂತಹ ಕುಡಿಯುವ ನೀರಿನ ಸಮಸ್ಯೆಯನ್ನು ಕೂಡಲೇ ಬಗೆಹರಿಸಲಾಗುತ್ತದೆ. ಗ್ರಾಮಸ್ಥರ ಸಮಸ್ಯೆಗೆ ಜಿಲ್ಲಾಡಳಿತ ಸದಾ ಸ್ಪಂದಿಸುತ್ತದೆ ಎಂದು ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement