ನೆಲಕ್ಕುರುಳಿದ ದೇಗುಲ ಗರುಡಗಂಬ
ಅರಸೀಕೆರೆ: ಪುರಾಣ ಪ್ರಸಿದ್ದ ಮಾಲೇಕಲ್ ತಿ ರುಪತಿಯ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಾಲಯದ ಮುಂಭಾಗ ಪ್ರತಿಷ್ಠಾಪಿಸಲಾಗಿದ್ದ ಗರುಡ ಕಂಬ ಬಿರುಗಾಳಿಗೆ ಸಿಲ್ಕಿ ಬುಡಸಮೇತ ನೆಲಕ್ಕುರುಳಿರುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ.
ಕಳೆದ ಎಂಟು ವರ್ಷಗಳ ಹಿಂದೆ ದಾನಿಯೊಬ್ಬರು ಗರುಡ ಕಂಬಕ್ಕೆಂದು 30 ಅಡಿ ಉದ್ದದ ಸಂಪಿಗೆ ಮರವನ್ನು ನೀಡಿದ್ದರು. ಈ ಮರದ ಕಂಬಕ್ಕೆ ದೇವಸ್ಥಾನದ ಆಡಳಿತ ಮಂಡಲಿ ಹಿತಾಳೆ ಕವಚ ಅಳವಡಿಸಿ ಶಾಸ್ತ್ರೋಕ್ತವಾಗಿ ಗರುಡ ಕಂಬವನ್ನು ಪ್ರತಿಷ್ಠಾಪಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಈ ಗಡುಡಕಂಬಕ್ಕೆ ದೇವಸ್ಥಾನದ ಅರ್ಚಕರು ಪೂಜೆ ಸಲ್ಲಿಸುತ್ತಾ ಬಂದಿದ್ದರು.
ಆದರೆ ಬಿರುಗಾಳಿಯ ರಭಸಕ್ಕೆ ಸಿಲುಕಿ ಧರೆಗೆ ಉರುಳಿರುವುದು ಭಕ್ತರ ಆಂತಕಕ್ಕೆ ಕಾರಣವಾಗಿದ್ದು ಈ ಘಟನೆಯಿಂದ ಊರಿಗೇನಾದರೂ ಕೆಡುಕಾಗಬಹುದು ಎಂಬ ಆತಂಕ ಭಕ್ತರದಾಗಿದ್ದು ಇದನ್ನು ಪರಿಹರಿಸುವಂತೆ ದೇವರ ಮೊರೆ ಕೂಡ ಭಕ್ತರು ಹೋಗುತ್ತಿದ್ದಾರೆ.
ರಥೋತ್ಸವ: ಪ್ರತಿ ವರ್ಷ ಆಷಾಢ ಮಾಸದಲ್ಲಿ ಇಲ್ಲಿ ನಡೆಯುವ ಲಕ್ಷ್ಮೀವೆಂಕಟರಮಣ ಸ್ವಾಮಿಯ ಮಹಾರಥೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರ ದಂಡೇ ಹರಿದು ಬರುತ್ತದೆ. ಹಾಗಾಗಿ ಜು. 9ರಂದು ರಥೋತ್ಸವದ ದಿನಾಂಕ ನಿಗದಿಯಾಗಿದ್ದು ಈ ಮುನ್ನವೇ ಗರುಡಕಂಬ ನೆಲಕ್ಕುರುಳಿರುವುದು ಆತಂಕಕ್ಕೆಡೆಮಾಡಿಕೊಟ್ಟಿದೆ.
ಘಟನಾ ಸ್ಥಳಕ್ಕೆ ತಹಸಿಲ್ದಾರ್ ನಟರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಘಟನೆಯನ್ನು ಮುಜರಾಯಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಆನಂತರ ಅವರ ಸೂಚನೆಯ ಮೆರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.