ವೃದ್ಧೆಗೆ ಪಿಂಚಣಿ ನೀಡದೆ ವಂಚಿಸಿದ ಅಂಚೆಯಣ್ಣ
ಆಲೂರು: ತಾಲೂಕಿನ ಕಾಟಿಹಳ್ಳಿ ಗ್ರಾಮದ ಸುಮಾರು 80 ವರ್ಷ ವಯಸ್ಸಿನ ವೃದ್ಧೆಯೊಬ್ಬರ ಪಿಂಚಣಿ ಹಣವನ್ನು ಪೋಸ್ಟ್‌ಮನ್ ಒಬ್ಬ 16 ತಿಂಗಳಿನಿಂದ ನೀಡದೆ ದುರುಪಯೋಗ ಪಡೆಸಿಕೊಂಡಿರುವ ಘಟನೆ ನಡೆದಿದೆ.
ತಾಲೂಕಿನ ಕಾಟಿಹಳ್ಳಿ ಗ್ರಾಮದ ಲೇ. ದೇವೇಗೌಡ ಎಂಬುವವರ ಪತ್ನಿ ವೃದ್ಧೆ ಮಾಯಮ್ಮ (80) ಮೋಸಕ್ಕೊಳಗಾದವರು. ಪಿಂಚಣಿ ಹಣದಿಂದ ಈ ವೃದ್ಧೆಯ ಜೀವನ ನಿರ್ವಹಣೆ ನಡೆಯುತ್ತಿದ್ದು, ಇವರಿಗೆ ಬೇರಾವುದೇ ಆದಾಯವಿಲ್ಲ.
ಬಾಕಿ ಇರುವ ಹಣವನ್ನು ಕೇಳಲು ಹೋದರೆ ದೊಡ್ಡ ಕಣಗಾಲು ಗ್ರಾಮದ ಅಂಚೆಯ ಪೋಸ್ಟ್ ಮನ್ ಮಂಜು, ನಿಮಗೆ ಇನ್ನೂ ಯಾವುದೇ ಹಣ ಬಂದಿಲ್ಲ ಎಂದು ಸುಳ್ಳು ಹೇಳುತ್ತಾನೆ. ಹಿಂದಿನ ಹಣ ಕೇಳಿದರೆ ಸ್ವಂತಕ್ಕೆ ಬಳಸಿಕೊಂಡಿರುವುದಾಗಿ ಹೇಳುತ್ತಿದ್ದು, ತನಗೆ ಬಾಕಿ ಹಣದ ಜೊತೆಗೆ ಸೂಕ್ತ ನ್ಯಾಯ ದೊರಕಿಸಿ ಕೊಡಬೇಕೆಂದು ವೃದ್ಧೆ ಮಹಿಳೆ ಪಟ್ಟಣದ ಅಂಚೆ ಕಚೇರಿಗೆ ದೂರು ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಂಚೆ ಇಲಾಖೆಯ ಅಧಿಕಾರಿ, ಪ್ರತಿ ತಿಂಗಳು ಪಿಂಚಣಿ ಹಣ ಸರಿಯಾಗಿ ಬರುತ್ತಿದೆ. ಕಳೆದ ತಿಂಗಳಿನವರೆಗೂ ರು. 400 ಇದ್ದ ಪಿಂಚಣಿ ಹಣ ಈಗ ರು. 500 ಆಗಿದೆ. ಪಿಂಚಣಿ ಹಣ ಸರಿಯಾಗಿ ನೀಡುತ್ತಿಲ್ಲ ಹಾಗು ಈ ತಿಂಗಳೂ ಸಹ ರು. 400 ನೀಡುತ್ತಿರುವ ಬಗ್ಗೆ ದೂರುಗಳಿದ್ದು, ಲಿಖಿತವಾಗಿ ದೂರು ನೀಡಿದರೆ ಅಂತಹವರ ವಿರುದ್ದ ಕ್ರಮ ಕೈಗೊಳ್ಳಬಹುದೆಂದರು.