ಶಾಂತಿಯುತ ಮರು ಮತದಾನ
ಅರಸೀಕೆರೆ: ಮತಯಂತ್ರದಲ್ಲಿ ಕಂಡು ಬಂದ ದೋಷದ ಹಿನ್ನೆಲೆಯಲ್ಲಿ ತಾಲೂಕಿನ ಪೇಟೆ ಬಾಣಾವರ ಮತಗಟ್ಟೆ 72ರಲ್ಲಿ ಮರು ಮತದಾನ ಪ್ರಕ್ರಿಯೆ ಬೆಳಗ್ಗೆ 7ರಿಂದ ಆರಂಬಗೊಂಡು ಸಂಜೆ 6 ರವರೆಗೆ ಶಾಂತಿಯುತವಾಗಿ ಮುಕ್ತಾಯವಾಯಿತು. ಸಂಜೆ 5 ಗಂಟೆ ವೇಳೆಗೆ ಲಭ್ಯವಾದ ಮಾಹಿತಿಯ ಪ್ರಕಾರ 535 ಮತಗಳಿಗೆ 374 ಮತಗಳು ಚಲಾವಣೆಯಾಗಿದ್ದವು.
ಕಳೆದ ಏ. 17ರಂದು ನಡೆದ ಚುನಾವಣೆಯ ಮತದಾನದ ವೇಳೆ ಸಂಜೆ 4 ರವರೆಗೆ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿದ್ದು ಆ ವೇಳೆಗೆ 406 ಮಂದಿ ಮತದಾನ ಮಾಡಿದ್ದು ಮತಯಂತ್ರ ಕೆಟ್ಟು ನಿಂತಿರುವುದರಿಂದ ದುರಸ್ಥಿ ನಂತರ ಮತಎಣಿಕೆ ಅಸಾಧ್ಯ ಎಂಬ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಮರುಮತದಾನಕ್ಕೆ ಆದೇಶಿಸಿದ್ದರಿಂದ ಇಂದು ಮರುಮತದಾನ ನಡೆಯಿತು.
ಗೊಂದಲದ ವಾತಾವರಣ: ಮತದಾನ ಆರಂಭಗೊಂಡ ಕೆಲ ತಾಸುಗಳಲ್ಲಿ ರಾಜಕೀಯ ಪಕ್ಷದ ಕಾರ್ಯಕರ್ತರೊಬ್ಬರು ನಕಲಿ ಮತದಾನ ಮಾಡಲು ಮುಂದಾದ ವೇಳೆ ಪಕ್ಷಗಳ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಸಕಾಲಕ್ಕೆ ಸ್ಥಳಕ್ಕಾಗಮಿಸಿದ ಪೊಲೀಸರು ಗೊಂದಲ ನಿವಾರಿಸಿದರಲ್ಲದೆ ಉಭಯ ಪಕ್ಷದ ಮುಖಂಡರನ್ನು ಮತಗಟ್ಟೆ ಸಮೀಪದಿಂದ ದೂರ ಕಳುಹಿಸುವ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸಿದರು.
ಮರು ಮತದಾನದ ಹಿನ್ನೆಲೆಯಲ್ಲಿ ಭಾನುವಾರದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಮಾಡಿದ್ದು ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು.
ಶೇ.68ರಷ್ಟು ಮತದಾನ
ಅರಸೀಕೆರೆ: ಮತಯಂತ್ರದ ದೋಷದ ಹಿನ್ನೆಲೆಯಲ್ಲಿ ಅರಸೀಕೆರೆ ತಾಲೂಕಿನ ಪೇಟೆ ಬಾಣಾವಾರದಲ್ಲಿ ಮಂಗಳವಾರ ನಡೆದ ಮರುಮತದಾನದಲ್ಲಿ ಶೇ. 68ರಷ್ಟು ಮತದಾನವಾಗಿದೆ. ಒಟ್ಟು 535 ಮತದಾರರ ಪೈಕಿ ಪುರುಷರು 193, ಮಹಿಳೆಯರು 173 ಮತದಾನ ಮಾಡಿದ್ದಾರೆ ಹಾಗೂ ಇಬ್ಬರು ಸರ್ಕಾರಿ ನೌಕರರ ಮತದಾನ ಸೇರಿದಂತೆ ಒಟ್ಟಾರೆಯಾಗಿ 368 ಮರು ಮತದಾನವಾಗಿವ ಮೂಲಕ ಶೇ. 68ರಷ್ಟು ಮತದಾನವಾಗಿದೆ.